ಮಕ್ಕಳನ್ನು ಅಹಂಕಾರಿಯಾಗಲು ಬಿಡಬೇಡಿ

ಗಬ್ಬೂರು:- ನಿಮ್ಮ ಮಗು ಸುಂದರವಾಗಿದ್ದರೆ, ಗೌರ ವರ್ಣದಿಂದ ಕೂಡಿದ್ದರೆ ಕಪ್ಪುಬಣ್ಣದ ಮಕ್ಕಳನ್ನು ಕಂಡರೆ ತಾತ್ಸರ ಭಾವನೆಯಿಂದ ಕಾಣಬಹುದು. ಏಕೆಂದರೆ ನಿಮ್ಮ ವರ್ತನೆಯನ್ನು ಮಗು ಅನುಕರಣೆ ಮಾಡಲು ಯತ್ನಿಸುತ್ತದೆ. ಏಕೆ ಈ ಮಾತು ಹೇಳಿದೆ ಎಂದರೆ ಮಕ್ಕಳಲ್ಲಿ ಬಾಲ್ಯದಲ್ಲೇ ಅಹಂಕಾರ ಹುಟ್ಟಲು ನಾವು ಅವಕಾಶ ನೀಡಿದರೆ ಮುಂದೆ ಅದು ಮಗುವಿನ ವ್ಯಕ್ತಿತ್ವ ರೂಪಿಸಿಕೊಳ್ಳಲು ಅಡ್ಡಿಯಾಗಬಹುದು. ಸಾಮಾಜಿಕವಾಗಿ ಎಲ್ಲರೊಡನೆ ಬೆರೆಯಲು ತೊಡಕು ಉಂಟು ಮಾಡಬಹುದು. ಮಕ್ಕಳು ಕೆಲವೊಮ್ಮೆ ತಾಯಿಯೊಂದಿಗೆ ವಾದ ಮಾಡುತ್ತ “ನೀನು ಕಪ್ಪಗಿದ್ದೀಯಾ,ಆದರೆ ನನ್ನ ನೋಡು ಎಷ್ಟು ಬೆಳ್ಳಗಿದ್ದೀನಿ” ಎಂದು ಗರ್ವದಿಂದ ಹೇಳಿಕೊಳ್ಳುತ್ತಾರೆ. ಅಂತ ಸಮಯದಲ್ಲಿ ಮಗುವಿನ ಮೇಲೆ ಸಿಟ್ಟು ಮಾಡಿ ಕೊಳ್ಳಬಾರದು.ಅದಕ್ಕೆ ತನ್ನ ಅಹಂಕಾರದ ಅರಿವು ಇರುವುದಿಲ್ಲ. ಹೀಗಾಗಿ ಅಂತಹ ಸಂದರ್ಭಗಳು ಎದುರಾದಾಗ ಮಗುವಿಗೆ ಸೂಕ್ಷ್ಮತೆಯಿಂದ ಅರ್ಥ ಮಾಡಿಸಿಕೊಡುವ ಕೆಲಸ ಮಾಡಿ. ಅದರಲ್ಲಿರುವ ಅಹಂಕಾರವನ್ನು ಹೊರತೆಗೆಯುವ ಪ್ರಯತ್ನ ನಡೆಸಿ. ಯಾವ ವ್ಯಕ್ತಿ ಎಷ್ಟೇ ಕುರೂಪಿಯಾಗಿರಲಿ ಅಥವಾ ಸುಂದರನೇ ಆಗಿರಲಿ ಅವನ ವ್ಯಕ್ತಿತ್ವ ನಿಂತಿರುವುದು ಆತನಲ್ಲಿರುವ ಒಳ್ಳೆಯ ಗುಣಗಳ ಮೇಲೆ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಡಿಕೋಡಿ. ಹೀಗೆ ಬಾಲ್ಯದಲ್ಲಿ ನೀಡುವ ಸಂಸ್ಕಾರ ಮಗುವಿಗೆ ಕೊನೆಕಾಲದವರೆಗೂ ಉಳಿದುಕೊಳ್ಳುತ್ತದೆ ಎಂದು ದೇವದುರ್ಗ ಸಮೀಪದ ನಗರಗುಂಡದ ಅರವಿನ ಮನೆಯ ಬಸವ ದೇವರು ವಚನಾಮೃತದ ಮೂಲಕ ತಿಳಿಸಿದರು.