
ನವದೆಹಲಿ, ಮೇ೨೨- ಲೈಂಗಿಕ ಕಿರುಕುಳ ಆರೋಪವನ್ನು ಇತ್ಯರ್ಥಪಡಿಸುವ ಸಲುವಾಗಿ ಮಂಪರು ಪರೀಕ್ಷೆಗೆ ಒಳಗಾಗಲು ಸಿದ್ಧವಾಗಿದ್ದು,ಕೆಲ ಷರತ್ತುಗಳು ಅನ್ವಯ ಎಂದು ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ವಿವಾದ ಕುರಿತು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಮಂಪರು ಪರೀಕ್ಷೆ, ಪಾಲಿಗ್ರಫ್ ಪರೀಕ್ಷೆ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧ. ಆದರೆ ನನ್ನ ಷರತ್ತು ಎಂದರೆ ವಿಜೇಶ್ ಫೋಗತ್ ಮತ್ತು ಬಜರಂಗ್ ಪೂನಿಯಾ ಕೂಡಾ ಈ ಪರೀಕ್ಷೆಗೆ ಒಳಗಾಗಬೇಕು.
ಇಬ್ಬರೂ ಕುಸ್ತಿಪಟುಗಳು ಪರೀಕ್ಷೆ ಮಾಡಿಸಿಕೊಂಡರೆ ಪತ್ರಿಕಾಗೋಷ್ಠಿ ಕರೆದು, ನಾನು ಕೂಡಾ ಇದಕ್ಕೆ ಸಿದ್ಧ ಎಂದು ಘೋಷಿಸುವ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಬಜರಂಗ್ ಪೂನಿಯಾ, ವಿನೇಶ್ ಫೋಗತ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವು ಮಂದಿ ಕುಸ್ತಿಪಟುಗಳು, ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಅವರ ಬಂಧನಕ್ಕೆ ಆಗ್ರಹಿಸಿ ಕಳೆದ ಏಪ್ರಿಲ್‌ನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸಮರ್ಥಿಸಿಕೊಂಡಿರುವ ಸಿಂಗ್, ಪ್ರಕರಣದಲ್ಲಿ ಸಿಲುಕಿಸಲು ಕುಸ್ತಿಪಟುಗಳು ಹುನ್ನಾರ ನಡೆಸಿದ್ದಾಗಿ ಪ್ರತ್ಯಾರೋಪ ಮಾಡಿದ್ದಾರೆ ಎಂದು ದೂರಿದರು.
ಮತ್ತೊಂದೆಡೆ, ಕುಸ್ತಿಪಟುಗಳ ಪ್ರತಿಭಟನೆಗೆ ಮತ್ತಷ್ಟು ಬೆಂಬಲ ವ್ಯಕ್ತವಾಗಿದೆ. ಭಾನುವಾರ ಹರ್ಯಾಣದ ಮೆಹಮ್‌ನಲ್ಲಿ ಸಭೆ ಸೇರಿದ ಖಾಪ್ ಪಂಚಾಯತ್ ಸರ್ವಾನುಮತದ ನಿರ್ಣಯ ಆಂಗೀಕರಿಸಿ, ಸಿಂಗ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.