ಮಂತ್ರ ಮಾಂಗಲ್ಯದಿಂದ ಕಂದಾಚಾರಕ್ಕೆ ಮುಕ್ತಿ ಸಾಧ್ಯ

ಮಧುಗಿರಿ, ಏ. ೧- ಮಂತ್ರ ಮಾಂಗಲ್ಯ ವಿವಾಹದಿಂದ ಅಜ್ಞಾನ ಮತ್ತು ಕಂದಾಚಾರದಿಂದ ಮುಕ್ತಿ ಹೊಂದಬಹುದು ಎಂದು ಪ್ರೊಫೆಸರ್ ರಾಜಪ್ಪ ದಳವಾಯಿ ತಿಳಿಸಿದ್ದಾರೆ.
ಪಟ್ಟಣದ ಬರಗೂರು ರಾಮಚಂದ್ರಪ್ಪ ಮಂದಿರದಲ್ಲಿ ಕುವೆಂಪು ಆಶಯದಂತೆ ನಡೆದ ನರಸಿಂಹಮೂರ್ತಿ ಮತ್ತು ನಾಗಮಣಿ ದಂಪತಿಗಳ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂತ್ರ ಮಾಂಗಲ್ಯ ವಿವಾಹವು ಮನುಷ್ಯ ಸಮಾಜದ ಧರ್ಮ ಸಂಪ್ರದಾಯಗಳನ್ನು ತಿರಸ್ಕರಿಸಿದಂತೆ. ಇಂತಹ ವಿವಾಹಗಳಿಂದ ಯಾವುದೇ ಧರ್ಮ ಮತಕ್ಕೆ ಸೇರುವ ಅಗತ್ಯವಿಲ್ಲ ಎಂದು ಸಮಾಜಕ್ಕೆ ತೋರಿಸಬಹುದಾಗಿದೆ ಎಂದರು.
ದಂಪತಿಗಳು ಕಡ್ಡಾಯವಾಗಿ ವಿವಾಹ ನೋಂದಣಿಯನ್ನು ಮಾಡಿಸಬೇಕು. ಕಾನೂನಿನ ಪ್ರಕಾರ ಹಕ್ಕುಬಾಧ್ಯತೆಗಳನ್ನು ಒಳಗೊಂಡಿರುತ್ತದೆ ಎಂದರು.
ಶಿವಾರೆಡ್ಡಿ ಮಾತನಾಡಿ, ಮಂತ್ರ ಮಾಂಗಲ್ಯದಂತಹ ವಿವಾಹಗಳಿಂದ ಮನುಷ್ಯ ಸಮಾಜದ ಕೃತಕ ಜಾತಿ ವ್ಯವಸ್ಥೆಯಿಂದ ಮುಕ್ತಿ ಹೊಂದಬಹುದು. ಸರಳ ವಿವಾಹಗಳು ಕ್ರಾಂತಿಕಾರಕ ಘಟನೆಗಳು ಎಂದು ತಿಳಿಸಿದರು.
ಕೆ.ಪಿ. ನಟರಾಜು ಮಾತನಾಡಿ, ಮಂತ್ರ ಮಾಂಗಲ್ಯ ವಿವಾಹವು ಕ್ರಾಂತಿಕಾರಕ ಮದುವೆ ವಿಧಾನ. ಈ ವಿವಾಹವು ವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಿ ವಿಶಿಷ್ಟತೆ ಹೊಂದಿದೆ. ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮ ಅರವತ್ತು ವರ್ಷಗಳ ಇತಿಹಾಸ ಹೊಂದಿದೆ. ದಂಪತಿಗಳು ಭಿನ್ನಾಭಿಪ್ರಾಯ ಮೀರಿ ಜೀವನ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಸುಜ್ಞಾನಮೂರ್ತಿ, ನೀರಕಲ್ಲು ರಾಮಕೃಷ್ಣಪ್ಪ, ರವಿಕುಮಾರ್ ನೇಹ, ಜಗದೀಶ್, ಡಾ. ಬಂದ್ರೆಹಳ್ಳ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.