ಮಂತ್ರಿ ಮಾಲ್ ಪುನಾರಂಭ

ಬೆಂಗಳೂರು, ಮೇ.೧೭- ಆಸ್ತಿ ತೆರಿಗೆ ಹಣದ ಬಾಕಿ ಜುಲೈ ೩೧ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ೧೦ ಗಂಟೆಯಿಂದ ಬೆಂಗಳೂರಿನ ಮಲ್ಲೇಶ್ವರದ ಪ್ರತಿಷ್ಠಿತ ಮಂತ್ರಿ ಮಾಲ್ ಮತ್ತೆ ಆರಂಭಗೊಂಡಿದೆ.
ಹಾಕಲಾಗಿರುವ ಬೀಗ ತೆಗೆಯುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿದ ಹಿನ್ನೆಲೆ ಇಂದು ಮಂತ್ರಿ ಮಾಲ್ ಹೆಬ್ಬಾಗಿಲು ಅನ್ನು ಸಿಬ್ಬಂದಿ ತೆರೆದರು. ಆನಂತರ ಎಂದಿನಂತೆ ಗ್ರಾಹಕರು ಒಳಪ್ರವೇಶಿಸಿದರು.
ಇನ್ನೂ, ಮಾಲ್‌ಗೆ ಬೀಗ ಹಾಕಿರುವ ಬಿಬಿಎಂಪಿಯ ಕ್ರಮ ಪ್ರಶ್ನಿಸಿ ಮಾಲ್ ಮಾಲೀಕರಾಗಿರುವ ಅಭಿಷೇಕ್ ಪ್ರಾಪ್‌ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಿನ್ನೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಕಂಪೆನಿಯ ಹಣಕಾಸು ಅಧಿಕಾರಿ ಪ್ರಮಾಣ ಪತ್ರ ಸಲ್ಲಿಸಿ, ೨೦೨೪ರ ಜುಲೈ ೩೧ರೊಳಗೆ ೨೦ ಕೋಟಿ ರೂಪಾಯಿ ಹಣವನ್ನು ಬಿಬಿಎಂಪಿಗೆ ಪಾವತಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.
ಇದನ್ನು ದಾಖಲಿಸಿಕೊಂಡ ಪೀಠವು ಅರ್ಜಿದಾರ ಕಂಪೆನಿಯು ೨೦೨೪ರ ಜೂನ್ ೧ರೊಳಗೆ ೩.೫ ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಕ್ರವಾರ (ಮೇ ೧೭) ಬೆಳಗ್ಗೆ ೧೦ ಗಂಟೆಯಿಂದ ಮಾಲ್ ಹಾಕಿರುವ ಬೀಗವನ್ನು ಬಿಬಿಎಂಪಿ ತೆಗೆಯಬೇಕು ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ನೀಡಿತು.
ಇದಕ್ಕೂ ಮುನ್ನ, ಅರ್ಜಿದಾರ ಕಂಪೆನಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಮಾಲ್‌ನಲ್ಲಿ ೨೫೦ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಕೇಂದ್ರಗಳಿವೆ. ಸುಮಾರು ೨,೫೦೦ ಉದ್ಯೋಗಿಗಳಿದ್ದಾರೆ. ೨೦೨೪ರ ಮೇ ೧೦ರಿಂದ ಕಾನೂನುಬಾಹಿರವಾಗಿ ಮಾಲ್‌ಗೆ ಬಿಬಿಎಂಪಿ ಬೀಗಹಾಕಿದೆ. ಇದರಿಂದ ಉದ್ಯೋಗಿಗಳಿಗೆ ಸಮಸ್ಯೆಯಾಗಿದ್ದು, ನಿತ್ಯ ಅಂದಾಜು ೭ ರಿಂದ ೮ ಕೋಟಿ ರೂಪಾಯಿ ವ್ಯಾಪಾರ ನಷ್ಟವಾಗುತ್ತಿದೆ ಎಂದರು.
ಮಾಲ್ ಮೇಲೆ ಬ್ಯಾಂಕ್ ಸಾಲದ ಮರುಪಾವತಿಯ ಹೊಣೆಯಿದೆ. ಬೀಗ ಹಾಕಿರುವುದರಿಂದ ಗಂಭೀರ ಸಮಸ್ಯೆಯಾಗಿದೆ. ಬಿಬಿಎಂಪಿ ಐದನೇ ಬಾರಿಗೆ ಮಾಲ್ ಮುಚ್ಚಿಸಿದೆ. ಈ ನಡೆ ಮಳಿಗೆಗಳ ಬಾಡಿಗೆದಾರರು ಅರ್ಜಿದಾರರ ವಿರುದ್ಧ ದಾವೆ ಹೂಡಲು ಮತ್ತು ಬಾಡಿಗೆ ಪಾವತಿಸಲು ನಿರಾಕರಿಸುವುದನ್ನು ಪ್ರೇರೇಪಿಸುತ್ತದೆ. ಅಕ್ಷಯ ತೃತೀಯ ದಿನದಿಂದ ಮಾಲ್ ಒಳಗಿರುವ ಚಿನ್ನಾಭರಣ ಮಳಿಗೆಗಳ ವ್ಯಾಪಾರಕ್ಕೆ ಅಡಚಣೆ ಉಂಟಾಗಿ, ದೊಡ್ಡ ನಷ್ಟವಾಗಿದೆ ಎಂದು ಆರೋಪಿಸಿದರು.