ಮಂತ್ರಿ ಮಾಲ್‌ಗೆ ಮತ್ತೇ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು, ಡಿ.೬- ಆಸ್ತಿ ತೆರಿಗೆಯ ಹಳೆ ಬಾಕಿ ಪಾವತಿಸದ ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ (ಅಭಿಷೇಕ್ ಡೆವಲಪರ್ಸ್) ಬಿಬಿಎಂಪಿ ಅಧಿಕಾರಿಗಳು ನಾಲ್ಕನೇ ಬಾರಿಗೆ ಬೀಗ ಜಡಿದಿದ್ದಾರೆ.
ನಗರದಲ್ಲಿಂದು ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತ ನೇತೃತ್ವದ ಅಧಿಕಾರಿಗಳ ತಂಡವು ಮಾಲ್‌ನ ವಹಿವಾಟುಗಳನ್ನು ಬಂದ್ ಮಾಡಿಸಿದ ಬಳಿಕ ಕಟ್ಟಡ ಮಾಲೀಕರು ತೆರಿಗೆ ಪಾವತಿ ಮಾಡಬೇಕೆಂದು ಪಟ್ಟು ಹಿಡಿದರು.
ಆಸ್ತಿ ತೆರಿಗೆಯ ಹಳೆ ಬಾಕಿ ಪಾವತಿಸುವಂತೆ ಮಂತ್ರಿ ಮಾಲ್‌ನ ಮಾಲೀಕರಿಗೆ ಅನೇಕ ಬಾರಿ ನೋಟಿಸ್ ಜಾರಿಮಾಡಿದ್ದೆವು. ಇದೇ ವರ್ಷದಲ್ಲಿ ಮೂರು ಬಾರಿ ಬೀಗ ಹಾಕಿ ಮಾಲ್‌ನ ವಹಿವಾಟು ಸ್ಥಗಿತಗೊಳಿಸಿದ್ದೆವು.
ಆಗ ಮಾಲೀಕರು ಕೋವಿಡ್ ಕಾರಣ ನೀಡಿ ಕಾಲಾವಕಾಶ ಕೇಳಿದ್ದರು. ನಮ್ಮ ನೋಟಿಸ್‌ಗಳಿಗೆ ಮಾಲ್‌ನ ಮಾಲೀಕರು ಸ್ಪಂದಿಸದ ಕಾರಣ ಬಾಕಿ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದೇವೆ ಎಂದು ಪಶ್ಚಿಮ ವಲಯದ ಅಧಿಕಾರಿಗಳು ತಿಳಿಸಿದರು.
ಅಲ್ಲದೆ, ಹತ್ತಾರು ಕೋಟಿ ಬಾಕಿ ಇದ್ದರೂ ನಾಲ್ಕೈದು ಕೋಟಿ ಮಾತ್ರ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಂತ್ರಿಮಾಲ್ ಆಸ್ತಿ ತೆರಿಗೆ ಪಾವತಿಯನ್ನೇ ಮಾಡಿಲ್ಲ.ಈ ಸಂಬಂಧ ಆಸ್ತಿ ತೆರಿಗೆ ೩೬ ಕೋಟಿ ಪಾವತಿಸಬೇಕಿತ್ತು.ಆದರೆ, ಅಕ್ಟೋಬರ್ ನಲ್ಲಿ ಬೀಗ ಹಾಕಿದಾಗ ತಾತ್ಕಾಲಿಕ ೫ ಕೋಟಿ ಡೆಪಾಸಿಟ್ ಮಾಡಿದ್ದರು.
ಉಳಿದ ಬಾಕಿ ೩೧ ಕೋಟಿಯನ್ನು ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋದಾಗಿ ಅವರೇ ಹೇಳಿದ್ದರು.ಅಕ್ಟೋಬರ್ ೩೧ ರ ಬಳಿಕ ಹಲವು ಬಾರಿ ನೋಟಿಸ್ ನೀಡಿದರೂ ಬಾಕಿ ಪಾವತಿ ಮಾಡಿರಲಿಲ್ಲ.
ಹೀಗಾಗಿ, ನವೆಂಬರ್ ೧೫ ರಂದು ಮತ್ತೆ ಬೀಗ ಹಾಕಲು ಮುಂದಾಗಿದ್ದ ವೇಳೆ ಹದಿನೈದು ದಿನ ಕಾಲಾವಕಾಶ ಕೇಳಿದ್ದರು.ಇದೀಗ ಅಂತಿಮ ಗಡುವು ಮುಗಿದಿರುವ ಕಾರಣ ನಾವು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.

ತೆರಿಗೆ ಬಾಕಿ ಎಷ್ಟು ?

  • ೨೦೧೮-೧೯ ರಲ್ಲಿ ಬಾಕಿ ೬ ಕೋಟಿ ೭೭ ಲಕ್ಷ
  • ೨೦೧೯-೨೦ ರಲ್ಲಿ ಬಾಕಿ ೬ ಕೋಟಿ ೭೭ ಲಕ್ಷ
  • ೨೦೨೦-೨೧ ರಲ್ಲಿ ಬಾಕಿ ೬ ಕೋಟಿ ೭೭ ಲಕ್ಷ
  • ೨೦೨೧-೨೨ ರಲ್ಲಿ ಬಾಕಿ ೬ ಕೋಟಿ ೮೮ ಲಕ್ಷ
  • ಒಟ್ಟು ತೆರಿಗೆ ಬಾಕಿ ೨೭ ಕೋಟಿ ೭೭ ಲಕ್ಷ ರೂ.