
ರಾಯಚೂರು,ಅ.೧-:ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹವಾಗಿದೆ. ರಾಯಚೂರಿಗೆ ಸಮೀಪಿಸಿರುವ ಮಂತ್ರಾಲಯದ ಶ್ರೀರಾಯರ ಮಠದಲ್ಲಿನ ಹುಂಡಿಗಳನ್ನು ತೆಗೆದು ಸಂಗ್ರಹವಾಗಿರುವ ಕಾಣಿಕೆಯ ಏಣಿಕೆ ನಡೆಸಲಾಯಿತು. ಇಡೀ ದಿನ ಎಣಿಕೆ ಕಾರ್ಯ ನಡೆದಿದ್ದು, ಇದುವರೆಗೆ ಸಂಗ್ರಹವಾಗಿದ್ದ ಮೊತ್ತಕ್ಕಿಂತಲೂ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
೩.೬೯ ಕೋಟಿ ರೂ. ವಿವಿಧ ಮೌಲ್ಯದ ಮುಖಬೆಲೆಯ ನೋಟುಗಳು, ೭.೦೫ ಲಕ್ಷ ರೂ. ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು ೩.೭೬ ಕೋಟಿ ರೂ.ಗಳು ಕಾಣಿಕೆಯಾಗಿ ಬಂದಿದೆ. ಇದರ ಜೊತೆಯಲ್ಲಿ ೯೯ ಗ್ರಾಂ ಚಿನ್ನ ಹಾಗೂ ೯೪೦ ಗ್ರಾಂ ಬೆಳ್ಳಿಯನ್ನು ಭಕ್ತರು ಶ್ರೀರಾಘವೇಂದ್ರ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ.
ಇದುವರೆಗೆ ಭಾರಿ ಪ್ರಮಾಣದ ಹಣ ಕಾಣಿಕೆ ರೂಪದಲ್ಲಿ ಬರುತ್ತಿತ್ತು. ಆದರೆ ರಾಯರ ಆರಾಧನಾ ಮಹೋತ್ಸವ ಹಾಗೂ ವಿಶೇಷ ಕಾರ್ಯಕ್ರಮದ ಸಂದರ್ಭಗಳಲ್ಲಿ ೩.೩೦ ಕೋಟಿ ರೂಪಾಯಿವರೆಗೂ ಕಾಣಿಕೆ ಬಂದಿತ್ತು. ಕಳೆದ ೩೪ ದಿನಗಳಿಂದ ೩.೭೬ ಕೋಟಿ ರೂಪಾಯಿವರೆಗೂ ಅತ್ಯಧಿಕ ಕಾಣಿಕೆಯನ್ನು ಭಕ್ತರು ಅರ್ಪಿಸಿದ್ದಾರೆ.
೨.೭೨ ಕೋಟಿ ರೂಪಾಯಿ ಸಂಗ್ರಹ: ಇನ್ನೊಂದೆಡೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ (ಆಗಸ್ಟ್ ೩೦-೨೦೨೨) ಕೋಟ್ಯಂತರ ರೂಪಾಯಿ ಕಾಣಿಕೆ ಸಲ್ಲಿಸಿದ್ದರು. ಆಗಸ್ಟ್ ತಿಂಗಳಲ್ಲಿ ಹುಂಡಿಯಲ್ಲಿ ಬರೋಬ್ಬರಿ ೨.೭೮ ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ಇದರಲ್ಲಿ ೨.೭೨ ಕೋಟಿ ರೂಪಾಯಿ ವಿವಿಧ ಮುಖಬೆಲೆಯ ನೋಟುಗಳು ಹಾಗೂ ೫.೮೯ ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳು ಹುಂಡಿಯಲ್ಲಿ ಸಂಗ್ರಹವಾಗಿದ್ದವು.