ಮಂತ್ರಾಲಯಕ್ಕೆ ಪಾದಯಾತ್ರೆ ಆರಂಭ


ಲಕ್ಷ್ಮೇಶ್ವರ ಃ ಮಂತ್ರಾಲಯ ಪಾದಯಾತ್ರಾ ಸಂಘದ ವತಿಯಿಂದ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ 65 ನೇ ವರ್ಷದ ಪಾದಯಾತ್ರೆಯು ಯಾತ್ರೆಯ ರೂವಾರಿ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಿಂದ ಸೋಮವಾರ ಪ್ರಾರಂಭವಾಯಿತು.
ಪ್ರತಿ ವರ್ಷದಂತೆ ಪಾದಯಾತ್ರೆಯು ಸೀಗಿಹುಣ್ಣಿಮೆಯಂದು ಪ್ರಾರಂಭವಾಗುತ್ತಿದ್ದು, ಗ್ರಹಣದ ಹಿನ್ನಲೆಯಲ್ಲಿ ಒಂದು ದಿನ ತಡವಾಗಿ ಆರಂಭವಾಗಿದ್ದು, ಪಾದಯಾತ್ರೆಯು ಅ.30 ರ ಸೋಮವಾರದಿಂದ ಪ್ರಾರಂಭಿಸಿ ನ.11 ರಂದು ಶನಿವಾರ ಶ್ರೀಕ್ಷೇತ್ರ ಮಂತ್ರಾಲಯವನ್ನು ತಲುಪಲಿದೆ. ಪಾದಯಾತ್ರೆ ಆರಂಭಕ್ಕೂ ಮುನ್ನ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪಾದಯಾತ್ರೆಯ ಯಶಸ್ವಿಗಾಗಿ ಪ್ರಾಣೇಶಾಚಾರ್ಯ ಅವಧಾನಿ ಅರ ನೇತೃತ್ವದಲ್ಲಿ ಹೋಮವನ್ನು ನೆರವೇರಿಸಲಾಯಿತು. ಪಾದಯಾತ್ರೆಯಲ್ಲಿ ನಿತ್ಯ ಈ ಹೋಮ ಹವನ, ಹರಿನಾಮಸ್ಮರಣೆ ನಡೆಸಲಾಗುವದರಿಂದ ಸಮಸ್ತ ಮಾನವ ಕುಲಕ್ಕೆ ಒಳ್ಳೆಯದಾಗಬೇಕೆಂಬ ಸಂಕಲ್ಪವನ್ನು ಹೊಂದಿದ್ದೇವೆ ಎಂದು ಅವಧಾನಿಗಳು ನುಡಿದರು.
ಪಾದಯಾತ್ರೆಯು ಸೋಮೇಶ್ವರನ ದರ್ಶನ ಪಡೆದು ಪಾಟೀಲ ಕುಲಕರ್ಣಿ ಅವರ ನಿವಾಸದಲ್ಲಿ ಸಭೆಯಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಸಂಘದ ವ್ಯವಸ್ಥಾಪಕ ಎನ್.ಕೆ.ಪಡಸಲಗಿ ಅವರು ಮಾತನಾಡಿ ಧಾರ್ಮಿಕ ಕ್ಷೇತ್ರದ ಪಾದಯಾತ್ರೆ ಮನಸ್ಸಿನಲ್ಲಿರುವ ದುರ್ಗುಣಗಳನ್ನು ನಾಶ ಮಾಡಿ ಸದ್ಗುಣಗಳ ಪ್ರಾಪ್ತಿಗೆ ಮುಕ್ತಿ ಮಾರ್ಗ ತೋರುವುದಾಗಿದೆ. ದಿ.ವೈದ್ಯ ಬಾಬುರಾವ್ ಕುಲಕರ್ಣಿಯವರ ಸಾತ್ವಿಕ ಶಕ್ತಿ ಈ ಪಾದಯಾತ್ರೆಯ ಯಶಸ್ವಿಗೆ ಕಾರಣವಾಗಿದೆ. ಅದೇ ರೀತಿಯ ಇನ್ನೊರ್ವ ಪಾದಯಾತ್ರಾ ಸಂಘದ ಕಾರ್ಯಾಧ್ಯಕ್ಷರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ದಿ.ಶ್ರೀನಿವಾಸ ಕುಲಕರ್ಣಿ(ತಂಗೋಡ) ಅವರ ಅಗಲಿಕೆಯು ಸಹ ಪಾದಯಾತ್ರೆಗೆ ತುಂಬಲಾರದ ನಷ್ಟವಾಗಿದ್ದು, ಇವರಿಬ್ಬರ ದಿವ್ಯಾತ್ಮ ನಮ್ಮ ಪಾದಯಾತ್ರೆಗೆ ದಾರಿದೀಪವಾಗಿರಲಿದೆ. ಅಂತಹ ಮಹಾನ ಚೇತನ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗುವ ಮೂಲಕ ಅವರ ದಿವ್ಯಾತ್ಮಕ್ಕೆ ಶಾಂತಿದೊರಕುವಂತೆ ಮಾಡಬೇಕೆಂದು ಮನವಿ ಮಾಡಿದರು. ಪಾದಯಾತ್ರೆಯು ನ.11 ರಂದು ಸಂಜೆ ಮಂತ್ರಾಲಯ ತಲುಪಲಿದ್ದು ಪಾದಯಾತ್ರೆಯಲ್ಲಿ ಧಾರ್ಮಿಕ ಚಿಂತನೆಗಳು, ನಿತ್ಯ ಪೂಜೆ, ಪಾರಾಯಣ, ಉಪನ್ಯಾಸಗಳು ನೆರವೇರಲಿವೆ. ಇಂತಹ ದೀರ್ಘಾವದಿಯ ಈ ಭಾಗದಲ್ಲಿಯೇ ಮೊದಲನೆಯದು ಎನ್ನಬಹುದಾದ ಪಾದಾಯಾತ್ರಾ ಸಂಘದ 65 ನೇ ವರ್ಷದ ಪಾದಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಪಲ್ಲಣ್ಣ ಕುಲಕಣಿ, ಕೃಷ್ಣ ಕುಲಕರ್ಣಿ(ತಂಗೋಡ), ಡಾ.ಶ್ರೀಹರಿ ಕುಲಕರ್ಣಿ, ಡಾ.ಬಿ.ಬಿ.ಜೋಶಿ, ಆರ್.ಎ. ಕುಲಕರ್ಣಿ, ಗೋಪಾಲ ಪಡ್ನೀಸ್, ಅನಿಲ ಕುಲಕರ್ಣಿ, ಗುರುರಾಜ ಪಾಟೀಲ ಕುಲಕರ್ಣಿ, ಲಕ್ಷ್ಮೀಕಾಂತ ಗಣಾಚಾರ, ಪ್ರಾಣೇಶ ಬೆಳ್ಳಟ್ಟಿ, ದಿಲೀಪ್ ಜೋಶಿ, ವೆಂಕಟೇಶ ಗುಡಿ, ರಾಜಾಚಾರ್ಯ ರಾಯಚೂರ, ಕೆ.ಎಸ್.ಕುಲಕರ್ಣಿ, ರಮೇಶ ತೊರಗಲ್, ನಾರಾಯಣ ಪಾಟೀಲಕುಲಕರ್ಣಿ, ಡಾ.ಮಂಗಸೂಳಿ, ಅನಿಲ ಕುಲಕರ್ಣಿ, ಶ್ರೀಕಾಂತ ಪೂಜಾರ, ಮುಂತಾದವರಿದ್ದರು. ಪಾದಯಾತೆಯು ಪಾಟೀಲಕುಲಕರ್ಣಿಯವರ ನಿವಾಸದಿಂದ ಹೊರಟು ಮುಂದೆ ಪ್ರಯಾಣ ಬೆಳೆಸಿತು. ಪಟ್ಟಣದ ಅನೇಕ ಮುಖಂಡರು ಪಾದಯಾತ್ರಿಕರನ್ನು ಶುಭಕೋರಿ ಬೀಳ್ಕೋಟ್ಟರು.