ಮಂಡ್ಯ-ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಭದ್ರನೆಲೆ ಹೊಂದಿದೆ: ಸಿ.ಎಸ್.ಪಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.23: ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಭದ್ರನೆಲೆ ಹೊಂದಿದೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಕೆ.ಆರ್.ಪೇಟೆ ಹೊರತು ಪಡಿಸಿ ಇತರೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋತಿರಬಹುದು. ಆದರೆ ಜಿಲ್ಲೆಯ ಒಟ್ಟಾರೆ ಮತಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕಿಂತಲೂ ಜೆಡಿಎಸ್ ಹೆಚ್ಚು ಮತಗಳನ್ನು ಪಡೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಮೈತ್ರಿಯಾಗಿದೆ. ಆದರೆ ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳುವ ಅವಕಾಶ ಯಾರಿಗೂ ಇಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ.
ಪಟ್ಟಣದ ಹೊಸಹೊಳಲು ರಸ್ತೆಯಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ಅವರ ಪುತ್ರ ರಘುರಾಂ ಆರಂಭಿಸಿರುವ ನೂತನ ರಘುರಾಂ ಪೆಟ್ರೋಲ್ ಬಂಕ್ ಉದ್ಘಾಟನೆಗೆ ಆಗಮಿಸಿದ್ದ ಸಿ.ಎಸ್.ಪುಟ್ಟರಾಜು ಸುದ್ದಿಗಾರರೊಂದಿಗೆ ಮಾತನಾಡಿ ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಎರಡೂ ಜಿಲ್ಲೆಗಳೂ ಜೆಡಿಎಸ್ ಪ್ರಾಭಲ್ಯದಲ್ಲಿವೆ ಎನ್ನುವ ಅಂಶ ಬಿಜೆಪಿ ಹೈಕಮಾಂಡಿಗೂ ಅರಿವಿದೆ. ಆದ ಕಾರಣ ಈ ಎರಡೂ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಮೂರು ಮತ್ತು ನಾಲ್ಕನೆ ಕ್ಷೇತ್ರಗಳಿಗೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂದರು.
ಮೈತ್ರಿ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಯಾವುದೇ ಗೊಂದಲವಿಲ್ಲ. ಎಲ್ಲವೂ ಹೆಚ್ಚು ಕಡಿಮೆ ನಿರ್ಧರಿತವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಬೇಕೆನ್ನುವುದು ನಮ್ಮೆಲ್ಲರ ಇಚ್ಚೆ. ಇದಕ್ಕಾಗಿ ಹೆಚ್.ಡಿ.ಕೆ ಸ್ಪರ್ಧಿಸುವಂತೆ ಒಂದು ಸಾಲಿನ ನಿರ್ಣಯ ಮಂಡಿಸಿದ್ದೇವೆ. ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಬಹಳಷ್ಟು ಜನ ಸಮರ್ಥರಿದ್ದಾರೆ. ಹೆಚ್.ಡಿ.ಕೆ ಕಣಕ್ಕಿಳಿಯದಿದ್ದರೆ ಪಕ್ಷ ತನ್ನ ಅಭ್ಯರ್ಥಿಯನ್ನು ತೀರ್ಮಾನಿಸಲಿದೆ. ಪಕ್ಷ ತೀರ್ಮಾನಿಸಿದ ಅಭ್ಯರ್ಥಿಯ ಪರ ನಾವೆಲ್ಲರೂ ಕೆಲಸ ಮಾಡಲಿದ್ದೇವೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಪುಟ್ಟರಾಜು ಹೇಳಿದರು.
ಹಾಲಿ ಸಂಸದೆ ಸುಮಲತಾ ಸ್ಪರ್ಧೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿ.ಎಸ್.ಪುಟ್ಟರಾಜು ನಾನು ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ಆ ಹಕ್ಕು ಕೂಡ ನನಗಿಲ್ಲ. ಸುಮಲತಾ ಸ್ಪರ್ಧೆ ಅವರ ನಿರ್ಧಾರವಾಗಿದ್ದು ಇದು ಬಿಜಿಪಿ ಪಕ್ಷಕ್ಕೆ ಬಿಟ್ಟ ವಿಚಾರ. ನಾವು ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಕಡೆ ನಮ್ಮ ಪಕ್ಷದ ವತಿಯಿಂದ ಯಾರೊಬ್ಬರೂ ಬಂಡಾಯ ಏಳದಂತೆ ಸರಿಪಡಿಸಿಕೊಳ್ಳಬೇಕಾದುದು ನಮ್ಮ ಧರ್ಮ. ಅದನ್ನು ನಾವು ಮಾಡುತ್ತೇವೆ. ಮೈತ್ರಿ ಧರ್ಮ ಪಾಲಿಸುವುದು ಬಿಜೆಪಿಗೆ ಬಿಟ್ಟ ವಿಚಾರ.
ಕೆ.ಆರ್.ಪೇಟೆ ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಯಾವುದೇ ವ್ಯವಹಾರ ನಡೆಸಿದರೂ ನಷ್ಠವಾಗುವುದಿಲ್ಲ. ನೂತನ ಪೆಟ್ರೋಲ್ ಬಂಕ್ ಆರಂಭಿಸಿರುವ ಯುವ ಉದ್ದಿಮೆದಾರ ರಘುರಾಂ ಅವರಿಗೆ ಒಳ್ಳೆಯದಾಗಲೆಂದು ಹಾರೈಸಿ ಪ್ರೆಟ್ರೋಲ್ ಬಂಕ್ ಉದ್ಘಾಟಿಸಿದ್ದೇನೆ. ಯುವಕರು ಹೆಚ್ಚು ಹೆಚ್ಚು ಸ್ವಯಂ ಉದ್ಯೋಗದ ಕಡೆ ಬರಬೇಕು.
ಸ್ವಯಂ ಉದ್ಯೋಗದಿಂದ ದೇಶದ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಸಿ.ಎಸ್.ಪುಟ್ಟರಾಜು ಅಭಿಪ್ರಾಯಪಟ್ಟರು.
ಶಾಸಕ ಹೆಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಮುಖಂಡರಾದ ಕೆ.ಎಸ್.ರಾಮೇಗೌಡ ಸೇರಿದಂತೆ ಹಲವರಿದ್ದರು.