ಮಂಡ್ಯ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಪರ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ

ಸಂಜೆವಾಣಿ ನ್ಯೂಸ್
ಕೆ.ಆರ್.ನಗರ,ಏ.15:- ಹಲವು ವರ್ಷಗಳಿಂದ ಇಲ್ಲಿ ಒಕ್ಕಲಿಗ ಸಮುದಾಯ ಭವನ ಇಲ್ಲದೆ ನಮ್ಮ ಸಮಾಜಕ್ಕೆ ತೊಂದರೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಪಟ್ಟಣದಲ್ಲಿ ಮೈತ್ರಿ ಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷಕ್ಕೆ ಒಂದು ವೋಟು ಲೀಡ್ ಕೊಟ್ಟರೆ ಯಾರಿಂದಲೂ ಒಂದು ರೂಪಾಯಿ ಕೇಳಿದೆ ಇಲ್ಲಿನ ಒಕ್ಕಲಿಗ ಸಮುದಾಯ ಭವನ ನಿರ್ಮಾಣ ಮಾಡಿಸಿಕೊಡುವುದು ನನ್ನ ಜವಾಬ್ದಾರಿ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು
ಪಟ್ಟಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರವಾಗಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾಗಿದ್ದ ತೆರಿಗೆ ಪಾಲಿನ ಹಣವನ್ನು ನೀಡಿಲ್ಲ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಇದರಿಂದ ಜನಸಾಮಾನ್ಯರಿಗೆ ಜೀವನ ಸಾಗಿಸಲು ಸಾಕಷ್ಟು ತೊಂದರೆ ಆಗಿದೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷ ಮತ್ತು ಅದರ ನಾಯಕರುಗಳನ್ನು ಅತಿ ಹೆಚ್ಚು ಟೀಕೆ ಮಾಡುತ್ತಿದ್ದ ಎಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಚುನಾವಣೆಯಲ್ಲಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ರಾಜ್ಯದ ಜನ ಏನೆಲ್ಲ ಮಾತನಾಡುತ್ತಿದ್ದಾರೆ ಎಂದು ಸಾಮಾನ್ಯ ಜನರಿಗೂ ಕೂಡ ಗೊತ್ತಾಗುತ್ತದೆ ಎಂದರು.
ಲೋಕಸಭಾ ಚುನಾವಣೆ ಮುಗಿದ ನಂತರ ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಎಂದು ವಿರೋಧಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಆದರೆ ನಮ್ಮದು ಜನಪರ ಸರ್ಕಾರ. ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಇನ್ನಷ್ಟು ಹೊಸ ಯೋಜನೆಗಳನ್ನು ಕೊಡುತ್ತೇವೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೈತ್ರಿ ಪಕ್ಷಗಳು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಅಂತಹ ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ತರುತ್ತದೆ ಎಂದರು.
ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಬಂದ ಕೆಲವು ದಿನಗಳಲ್ಲಿ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ಅವುಗಳನ್ನು ಮುಂದೆಯೂ ನಡೆಸಿಕೊಂಡು ಹೋಗುತ್ತೇವೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಮಂಡ್ಯ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ ಈಗ ಯಾವ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳನ್ನು ಸಮಾನವಾಗಿ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಈಗಾಗಲೇ ಸಾಲಿಗ್ರಾಮಕ್ಕೆ ಅಗತ್ಯವಿರುವ ಹಲವು ಕೆಲಸಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಗೊಳಿಸುವ ಕೆಲಸವನ್ನು ಮಾಡಲಾಗುವುದು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಅಧಿಕ ಮತಗಳಿಂದ ಆಯ್ಕೆ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲು ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ ನಾನೊಬ್ಬ ಮಂಡ್ಯ ಜಿಲ್ಲೆಯ ರೈತನ ಮಗನಾಗಿದ್ದು ಜನಸೇವೆ ಮಾಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡುವ ಮೂಲಕ ತಮ್ಮಗಳ ಸೇವೆಯನ್ನು ಮಾಡಲು ನನಗೊಂದು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸಾಲಿಗ್ರಾಮ ಪಟ್ಟಣಕ್ಕೆ ಆಗಮಿಸಿದ ಸಚಿವರು, ಶಾಸಕರು ಹಾಗೂ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳನ್ನು ಬೃಹತ್ ಗಾತ್ರದ ಮೋಸಂಬಿ ಹಾರವನ್ನು ಹಾಕುವುದರ ಮೂಲಕ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತೀಬ್ಬೆಗೌಡ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಸದಸ್ಯ
ಸಿ.ಪಿ.ರಮೇಶ್ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಸ್.ಎಸ್.ಸಂದೇಶ, ಜಿ. ಪಂ. ಮಾಜಿ ಸದಸ್ಯರುಗಳಾದ ಸಿದ್ದಪ್ಪ, ಚಂದ್ರಶೇಖರ, ಹೆಚ್.ಟಿ.ಮಂಜಪ್ಪ, ಮಾಜಿ ಸದಸ್ಯರಾದ ಎ.ಟಿ.ಗೋವಿಂದೇಗೌಡ, ಸಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಉದಯ್ ಶಂಕರ್, ಎಂ ಎಸ್ ಮಹದೇವ್, ನಗರ ಅಧ್ಯಕ್ಷರುಗಳಾದ ಪ್ರಭಾಕರ್, ರಮೇಶ್, ವಕ್ತಾರ ಜಾಬೀರ್, ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡರುಗಳಾದ ಕೋಳಿ ಪ್ರಕಾಶ್, ಜಿ.ಕೆ.ತೋಟಪ್ಪನಾಯಕ, ತಾಲೂಕು ಎಸ್ ಟಿ ಘಟಕದ ಅಧ್ಯಕ್ಷ ತಿಪ್ಪೂರ್ ಮಾದೇವ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರುಗಳು ಇದ್ದರು.