ಮಂಡ್ಯ ರಂಗಕಲಾಟ್ರಸ್ಟ್ ಉದ್ಘಾಟನೆ

ಸಂಜೆವಾಣಿ ವಾರ್ತೆ
ಮಂಡ್ಯ ಡಿ11 : ಮನುಷ್ಯನ ನಾಗರೀಕತೆ ಪ್ರಾರಂಭವಾದಾಗಲೇ ನಾಟಕ, ನೃತ್ಯ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭವಾದವು ಎಂದು ಮೈಸೂರಿನ ಅಬಕಾರಿ ಅಧೀಕ್ಷಕ ವಿಜಯಕುಮಾರ್ ಅಭಿಪ್ರಾಯಿಸಿದರು.
ನಗರದ ಹೊಸಹಳ್ಳಿ ಬಸವೇಶ್ವರ ದೇವಸ್ಥಾನ ಮುಂಭಾಗ ನಡೆದ ಮಧುರ ಮಂಡ್ಯ ರಂಗಕಲಾಟ್ರಸ್ಟ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ನಾಗರೀಕತೆ ಪ್ರಾರಂಭವಾಯಿತೋ ಆಗಲೇ ನಾಟಕವೂ ಪ್ರಾರಂಭವಾಯಿತು. ಧರ್ಮ, ದೇವರನ್ನು ಸೃಷ್ಠಿ ಮಾಡಿದ ನಂತರದ ದಿನಗಳಲ್ಲಿ ದೇವರನ್ನು ಮೆಚ್ಚಿಸಲು ನಾಟಕ, ನೃತ್ಯವನ್ನು ಮಾನವ ಸೃಷ್ಠಿ ಮಾಡುತ್ತಾನೆ ಎಂದು ವಿವರಿಸಿದರು.
ಮೊದಲೆಲ್ಲಾ ಭಾವ, ಮೂಕಾಭಿನಯದ ಮೂಲಕ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿತ್ತು. ಕಾಲ ಕ್ರಮೇಣ ಅದಕ್ಕೆ ಮಾತುಗಳ ಜೋಡಣೆಯನ್ನು ಮಾಡಲಾಯಿತು ಎಂದ ಅವರು, ಗ್ರೀಕ್ ನಾಗರೀಕತೆಯ ಮೊದಲ ದೇವತೆ ಎಂದರೆ ಡಯಾನಿಸ್. ಆ ದೇವತೆಯನ್ನು ಮೆಚ್ಚಿಸಲು ಗ್ರೀಕ್ ಜನರು ಸಂಗೀತ, ನಾಟ್ಯ, ನಟನೆಯನ್ನು ಪ್ರಾರಂಭಿಸಿದರು. ಆ ಮೂಲಕ ಅವರು ದೇವತೆಯನ್ನು ಮೆಚ್ಚಿಸಲು ಯತ್ನಿಸಿದರು ಎಂದು ಉಲ್ಲೇಖಿಸಲಾಗಿದೆ ಎಂದರು.
ಭಾರತದಲ್ಲಿ ಮೂಲಭೂತವಾಗಿ ಭರತಮುನಿ ನಾಟ್ಯಶಾಸ್ತ್ರದಲ್ಲಿ ಸಾಕಷ್ಟು ವಿಸ್ತೃತವಾಗಿ ಚರ್ಚೆ ಮಾಡುತ್ತಾರೆ ಮೂಲ ಪಾತ್ರವನ್ನು ರಂಗದ ಮೇಲೆ ಪಾತ್ರದಾರಿ ಪ್ರೇಕ್ಷಕರಿಗೆ ಮನಮುಟ್ಟುವಂತೆ ಹೇಳುವಂತಹ ಕಲೆಯನ್ನು ನಾಟಕ ಎಂದೂ ಕರೆಯಲಾಗುತ್ತದೆ. ನೋಡುವವರನ್ನು ಪ್ರೇಕ್ಷಕ ಎಂದು ಕರೆಯುವುದಿಲ್ಲ. ಅವರನ್ನು ಸಹೃದಯದವರು ಎಂದು ಕರೆಯುತ್ತಾರೆ ಮೂಲ ಪಾತ್ರಧಾರಿಗಳು ಬೇರೆಯೇ ಆದರೂ, ಅವರು ಅದನ್ನು ಅನುಭವಿಸಿ ಅಭಿನಯಿಸುತ್ತಾರೆ. ಅವರು ಹೇಗೆ ನಟನೆ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ನಾಟಕಗಳು ನಿಂತಿರುತ್ತದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ಹೇಳಿ ಕೇಳಿ ನಾಟಕಗಳು ಮತ್ತು ಕಲಾವಿದರಿಗೆ ಹೆಚ್ಚಿನ ಮನ್ನಣೆ ಇದೆ. ಮಂಡ್ಯದ ಡ್ರಾಮಾ ಸೀನರಿಗಳು, ಮಂಡ್ಯದ ಕಲಾವಿದರು ಎಂದರೆ ಬೇರೆ ಜಿಲ್ಲೆಗಳಿಗೆ ಒಂದು ರೀತಿಯ ಸಂತೋಷ. ಮಂಡ್ಯದ ಸೀನರಿ ಮತ್ತು ಕಲಾವಿದರು ಎಂಬುದನ್ನು ದಪ್ಪ ಅಕ್ಷರದಲ್ಲಿ ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಮಾಡುವುದೂ ಒಂದು ಕಾಲದಲ್ಲಿ ನೋಡಿದ್ದೆವು ಎಂದು ನೆನಪು ಮಾಡಿಕೊಂಡರು.
ಅದೇ ರೀತಿ ಮಧುರ ಮಂಡ್ಯ ರಂಗ ಕಲಾಟ್ರಸ್ಟ್ ಸಹ ಉತ್ತಮವಾಗಿ ಬೆಳೆದು ಕಲಾವಿದರು ಹೆಚ್ಚು ಹೆಚ್ಚು ನಟನಾ ಕೌಶಲ್ಯವನ್ನು ಪಡೆದುಕೊಂಡು ಯಶಸ್ವಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ. ಎ.ವಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ವಿದ್ವಾಂಸ ನರಸಿಂಹಚಾರ್, ಹಿರಿಯ ಕಲಾವಿದ ವೆಂಕಟೇಶ್, ತಾಳವಾದ್ಯ ಕಲಾವಿದ ಗುರುರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಗಗೀತೆ ನಿರ್ದೇಶಕ ಕಿರಗಸೂರು ರಾಜಪ್ಪ, ರಂಗಕಲಾವಿದರಾದ ರಾಧ, ಶಾಂತ ಅವರು ರಂಗಗೀತೆ ಪ್ರಸ್ತುತಪಡಿಸಿದರು.
ರಂಗನಿರ್ದೇಶಕರಾದ ಕೃಷ್ಣರಾಜು, ಗುರುಮೂರ್ತಿ, ನಗರಸಬಾ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜು, ನಗರಸಭಾ ಸದಸ್ಯೆ ಪವಿತ್ರ ಬೋರೇಗೌಡ, ಡ್ರಾಮಾ ಸೀನರಿ ಮಾಲೀಕ ಶಂಕರಪ್ಪ, ಮುಖಂಡರಾದ ಎಚ್.ಕೆ. ಶಂಕರೇಗೌಡ, ಡಿ. ನಾಗೇಶ್ ಮುಖ್ಯ ಅತಿಥಿಳಾಗಿ ಭಾಗವಹಿಸಿದ್ದರು.