ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಐದು ದಿನ ಕಂಪ್ಲೀಟ್ ಲಾಕ್‍ಡೌನ್

ಮಂಡ್ಯ: ಜೂ.06: ಜಿಲ್ಲೆಯಲ್ಲಿ ಸದ್ಯ ಕೊರೊನಾ ಹತೋಟಿಗೆ ಬರುತ್ತಿದ್ದು, ಸಂಪೂರ್ಣವಾಗಿ ಕೊರೊನಾ ನಿಯಂತ್ರಣ ಮಾಡಲು ಮಂಡ್ಯ ಜಿಲ್ಲಾಡಳಿತ ಇದೀಗ ಮತ್ತೆ ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾಧಿಕಾರಿ ಎಸ್. ಅಶ್ವಥಿ ಅವರು, ಮಂಡ್ಯ ಜಿಲ್ಲಾಡಳಿತ ಕಳೆದ ಎರಡು ವಾರದಲ್ಲಿ ಎಂಟು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮೊರೆ ಹೋದ ಕಾರಣ ಪ್ರತಿ ನಿತ್ಯ ಜಿಲ್ಲೆಯಲ್ಲಿ ದಾಖಲಾಗುತ್ತಿದ್ದ ಸಾವಿರಕ್ಕೂ ಅಧಿಕ ಕೊರೊನಾ ಕೇಸ್‍ಗಳು 500ರ ಗಡಿಗೆ ಬಂದು ನಿಂತಿದೆ. ಇದೀಗ ಪಾಸಿಟಿವ್ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ಕಂಪ್ಲೀಟ್ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಸದ್ಯ ಜೂನ್ 7, 8, 10, 12 ಮತ್ತು 13 ರಂದು ಸಂಪೂರ್ಣ ಲಾಕ್‍ಡೌನ್‍ನನ್ನು ಮತ್ತೆ ಘೋಷಣೆ ಮಾಡಿದೆ. ಈ ದಿನಗಳಲ್ಲಿ ಜಿಲ್ಲೆಯಲ್ಲಿ ಹಣ್ಣು, ತರಕಾರಿ, ದಿನಸಿ, ಮಾಂಸ ಖರೀದಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಉಳಿದಂತೆ ಬ್ಯಾಂಕ್‍ಗಳು, ಹಾಲಿನ ಬೂತ್‍ಗಳು, ಎಟಿಎಂ ಹಾಗೂ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಈ ಮಧ್ಯೆ ಜೂನ್ 6, 9 ಮತ್ತು 11ರಂದು ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್‍ನನ್ನು ಸಡಿಲಗೊಳಿಸಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಜನರು ಜಿಲ್ಲಾಡಳಿತದ ಈ ನಿರ್ಧಾರದ ಜೊತೆಗೆ ಸಹಕರಿಸಿ ಕೊರೊನಾ ನಿಯಂತ್ರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.