ಮಂಡ್ಯ ಜಾದಳ ಅಭ್ಯರ್ಥಿಯಾಗಿ ರಾಮಚಂದ್ರ ಫೈನಲ್: ಭಿನ್ನಮತ ಸ್ಪೋಟ

ಮಂಡ್ಯ : ಏ.20:- ಜಾತ್ಯತೀತ ಜನತಾದಳ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರ ಅವರನ್ನು ಕಣಕ್ಕಿಳಿಸಲಾಗಿದ್ದು, ಇದರೊಂದಿಗೆ ಜೆಡಿಎಸ್‍ನಲ್ಲೂ ಭಿನ್ನಮತ ಸ್ಪೋಟಗೊಂಡಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಬರುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇಂದು ಜೆಡಿಎಸ್ ತನ್ನ ಪಟ್ಟಿಯಲ್ಲಿ ಘೋಷಿತ ಅಭ್ಯರ್ಥಿ ಮಾಜಿ ಶಾಸಕ ಎಂ. ಶ್ರೀನಿವಾಸ್ ಅವರ ಬದಲಿಗೆ ಮನ್‍ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ ಅವರಿಗೆ ಟಿಕೆಟ್ ನೀಡುವ ಮೂಲಕ ಎಲ್ಲ ಗೊಂದಲಗಳಿಗೂ ತೆರೆ ಎಳೆಯಲಾಗಿದೆ.
ಮೊದಲ ಪಟ್ಟಿಯಲ್ಲೇ ಶಾಸಕ ಎಂ. ಶ್ರೀನಿವಾಸ್ ಹೆಸರನ್ನು ಘೋಷಿಸಿದ್ದ ಕಾರಣ ಶ್ರೀನಿವಾಸ್ ಮೈಚಳಿ ಬಿಟ್ಟು ಪ್ರಚಾರ ಕಾರ?ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಮಧ್ಯೆ ಮನ್‍ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಸಹ ಪ್ರಚಾರ ಕಾರ?ಯದಲ್ಲಿ ತೊಡಸಿಕೊಂಡಿದ್ದು, ಈ ಬಗ್ಗೆ ಶ್ರೀನಿವಾಸ್ ವರಿಷ್ಠರಿಗೆ ದೂರು ನೀಡಿದ್ದರು. ಬಳಿಕ ಪಂಚರತ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸುವಂತೆ ವರಿಷ್ಠರು ಎಲ್ಲ ಅಭ್ಯರ್ಥಿಗಳಿಗೂ ತಾಕೀತು ಮಾಡಿದ್ದರು.
ಈ ಮಧ್ಯೆ ಶ್ರೀನಿವಾಸ್ ಅಳಿಯ ಎಚ್.ಎನ್. ಯೋಗೇಶ್ ಹಾಗೂ ಕೆ.ವಿ. ಶಂಕರಗೌಡರ ಮೊಮ್ಮಗ, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ್ ಅವರೂ ಸಹ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇತ್ತೀಚೆಗೆ ನಗರಸಭೆ ಮಾಜಿ ಅಧ್ಯಕ್ಷ ಎಂ.ಜೆ. ಚಿಕ್ಕಣ್ಣ ಸಹ ನಾನೂ ಸಹ ಅಭ್ಯರ್ಥಿಯಾಗಿದ್ದು, ನನಗೇ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಎಲ್ಲರನ್ನೂ ಬದಿಗೊತ್ತಿದ ಪಕ್ಷದ ಹೈಕಮಾಂಡ್ ಬಿ.ಆರ್. ರಾಮಚಂದ್ರ ಅವರಿಗೆ ಮಣೆ ಹಾಕುವ ಮೂಲಕ ಟಿಕೆಟ್ ಸಂಬಂಧ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.
ಮೇಲುಕೋಟೆ ಕ್ಷೇತ್ರದವರು :
ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಬಿ.ಆರ್. ರಾಮಚಂದ್ರ ಅವರು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ದುದ್ದ ಹೋಬಳಿ ಬೊಮ್ಮನಹಳ್ಳಿ ಗ್ರಾಮದವರಾಗಿದ್ದು, ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ಅವರು ರಾಮಚಂದ್ರಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಭಿನ್ನಮತ ಸ್ಪೋಟ :
ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಆರ್. ರಾಮಚಂದ್ರ ಅವರನ್ನು ಘೋಷಿಸುತ್ತಿದ್ದಂತೆ ಶಾಸಕ ಎಂ. ಶ್ರೀನಿವಾಸ್ ಹಾಗೂ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ಅವರು ಆಕ್ಷೇಪ ವ್ಯಕ್ತಪಡಿಸಿ ವರಿಷ್ಠರ ವಿರುದ್ಧ ಹರಿಹಾಯ್ದಿದ್ದಾರೆ.
ಶಾಸಕ ಎಂ. ಶ್ರೀನಿವಾಸ್ ಅವರ ನಿವಾಸದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಬಿ.ಆರ್. ರಾಮಚಂದ್ರ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿದರು. ಪಕ್ಷ ತೊರೆಯುವ ಎಚ್ಚರಿಕೆ ನೀಡಿದರಲ್ಲದೆ, ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ವರಿಷ್ಠರಿಗೇ ಟಾಂಗ್ ನೀಡಿದ್ದಾರೆ.
ಬಿ.ಆರ್. ರಾಮಚಂದ್ರ ಅವರ ಹೆಸರು ಘೋಷಣೆಯಾದ ಸುದ್ಧಿ ಹರಡುತ್ತಿದ್ದಂತೆ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ಅವರ ಬಂದೀಗೌಡ ಬಡಾವಣೆಯಲ್ಲಿರುವ ನಿವಾಸದ ಮುಂದೆ ಸಹಸ್ರಾರು ಮಂದು ಬೆಂಬಲಿಗರು ಜಮಾಯಿಸಿದರು. ಪಕ್ಷದ ವರಿಷ್ಠರ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಕಣ್ಣೀರು ಹಾಕಿದ ಬೆಂಬಲಿಗರು :
ವಿಜಯಾಂದ ಅವರಿಗೆ ಬಹುತೇಕ ಟಿಕೆಟ್ ನೀಡುವುದಾಗಿ ವರಿಷ್ಠರು ವಾಗ್ದಾನ ಮಾಡಿದ್ದು, ಬೆಳೆಯುವ ಹಂತದಲ್ಲೇ ಮರವನ್ನು ಕಡಿದುಹಾಕುವ ಕೆಲಸವನ್ನು ಜೆಡಿಎಸ್ ವರಿಷ್ಠರು ಮಾಡಿದ್ದಾರೆ ಎಂದು ಬೆಂಬಲಿಗರು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ವಿಜಯಾನಂದ ಅವರೇ ಬೆಂಬಲಿಗರನ್ನು ಸಮಾಧಾನಪಡಿಸಿದರು. ನಂತರ ಬೆಂಬಲಿಗರ ಸಭೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.