ಮಂಡ್ಯದ ಸೀಗಡಿ ಉಪ್ಸಾರು ಮಾಡುವ ವಿಧಾನ

ಉಪ್ಪುಸಾರು (ಅತವಾ ಆಡುಮಾತಿನಲ್ಲಿ ಉಪ್ಸಾರು) ಎಂಬುದು ಮಂಡ್ಯ ಜಿಲ್ಲೆಯ ಬಹುತೇಕ ಊರುಗಳಲ್ಲಿ ವಾರಕ್ಕೊಮ್ಮೆಯಾದರೂ ಮಾಡುವ ಸಾರಾಗಿರುತ್ತದೆ. ಉಪ್ಸಾರು-ಮುದ್ದೆ ಒಳ್ಳೆ ಜೋಡಿ. ಜೊತೆಗೆ ಮಾವಿನಕಾಯಿ ನಂಚ್ಕೊಂಡು ತಿನ್ನೋ ರೂಡಿ ಬಹಳ ಕಡೆ ಇದೆ. ಸೀಗಡಿ ಕಾಲ ಬಂದಾಗ, ಅದೇ ಉಪ್ಸಾರನ್ನು ಅವರೆಕಾಳು ಹಾಗೂ ಸೀಗಡಿ ಜೊತೆ ಮಾಡಿ ತಿಂದರೆ, ಸ್ವರ?ಗಕ್ಕೆ ಎರಡೇ ಗೇಣು.

ಬೇಕಾದ ಸಾಮಾಗ್ರಿಗಳು
ಕಾರ ಮಾಡಲು
೧೦ ಒಣಮೆಣಸಿನಕಾಯಿ,
೨ ಬೆಳ್ಳುಳ್ಳಿ, ೧/೪ ಚಮಚ ಮೆಣಸು,
೧/೪ ಚಮಚ ಜೀರಿಗೆ,
ಗೋಲಿಗಾತ್ರದ ಹುಣಸೆಹಣ್ಣಿನ ರಸ,
೧ ಚಮಚ ಉಪ್ಪು, ೧ ಹಿಡಿ ಕೊತ್ತಂಬರಿ ಸೊಪ್ಪು

ಕಾರ ಮಾಡುವ ಬಗೆ
ಮೊದಲು ಒಣಮೆಣಸಿನಕಾಯಿಗಳನ್ನು ಉರಿದು ಮಿಕ್ಸಿಯಲ್ಲಿ ಹಾಕಿ. ನಂತರ ಉಪ್ಪು, ಬೆಳ್ಳುಳ್ಳಿ, ಮೆಣಸು, ಜೀರಿಗೆ ಮಿಕ್ಸಿಗೆ ಹಾಕಿ ನೀರು ಹಾಕದೆ ಪುಡಿಯಂತೆ ರುಬ್ಬಿಕೊಳ್ಳಿ. ನಂತರ ಹುಣಸೆ ರಸ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ರುಬ್ಬಿ. ಉಪ್ಸಾರು ಕಾರ ರೆಡಿ.

ಉಪ್ಸಾರು ಮಾಡಲು
೧ ಸಣ್ಣ ಬಟ್ಟಲು ಸಣ್ಣ ಸೀಗಡಿ.
೫ ಬೆಳ್ಳುಳ್ಳಿ ಎಸಳುಗಳು,
ಚೂರು ಕೊತ್ತಂಬರಿ ಸೊಪ್ಪು,
೧ ಬಟ್ಟಲು (ಸಣ್ಣ ಬಟ್ಟಲು) ಹಸಿ ಅವರೆಕಾಳು ಅಥವಾ ಉರಿದ ಒಣ ಅವರೆಕಾಳು.

ತಯಾರಿಸುವ ವಿಧಾನ
ಮೊದಲಿಗೆ ಅವರೆಕಾಳುಗಳನ್ನು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಿ.

ನಂತರ ಸೀಗಡಿಯನ್ನು ಕ್ಲೀನ್ ಮಾಡಿರಿ (ಸಾಮಾನ್ಯವಾಗಿ ಸಣ್ಣ ಸೀಗಡಿ ಜೊತೆ ಕೆಲವೊಮ್ಮೆ ಕಸ-ಕಡ್ಡಿ ಇರುತ್ತವೆ. ಅವನ್ನು ತೆಗೆದು ಹಾಕಬೇಕು).

ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಹಾಕದೆ ಸೀಗಡಿಯನ್ನು ೫ ನಿಮಿಶಗಳ ಕಾಲ ಉರಿದುಕೊಳ್ಳಿ. ಆಮೇಲೆ, ಸಾರು ಮಾಡುವ ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ, ತೆಳುವಾಗಿ ಕತ್ತರಿಸಿದ ಬೆಳ್ಳುಳ್ಳಿ ಎಸಳುಗಳು, ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ೨ ನಿಮಿಶ ಉರಿಯಿರಿ.

ನಂತರ ಮುಂಚೆಯೇ ರುಬ್ಬಿಕೊಂಡ ಕಾರದಲ್ಲಿ ೧ ಚಮಚದಶ್ಟು ಕಾರವನ್ನು ಸ್ವಲ್ಪ ನೀರಿನೊಡನೆ ಕಲಸಿ ಸಾರಿನ ಪಾತ್ರೆಗೆ ಹಾಕಿ. ನಂತರ ಮುಂಚೆಯೇ ಬೇಯಿಸಿಟ್ಟುಕೊಂಡಿದ್ದ ಕಾಳಗಳನ್ನು ಹಾಕಿ, ಸಾರಿಗೆ ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಷು ಉಪ್ಪು, ಮತ್ತೆ ಸ್ವಲ್ಪ ಕಾರವನ್ನು (ಮುಂಚೆ ರುಬ್ಬಿಕೊಂಡುದು) ಹಾಕಿ, ೧೫ ನಿಮಿಶಗಳ ಕಾಲ ಕುದಿಸಿ.

ಬಿಸಿ ಬಿಸಿ ಮಂಡ್ಯ ಮಾದರಿ ಸೀಗಡಿ ಉಪ್ಸಾರು ರೆಡಿ.