ಬೆಂಗಳೂರು,ಜೂ.೧೬- ನಟ ಅಭಿಷೇಕ್ ಅಂಬರೀಷ್ ಹಾಗು ಅವೀವಾ ಅವರ ಮದುವೆ ಹಿನ್ನೆಲೆಯಲ್ಲಿ ಮಂಡ್ಯದ ಜನರಿಗೆ ನಟಿ ಹಾಗು ಸಂಸದೆ ಸುಮಲತಾ ಅಂಬರೀಷ್ ಬೀಗರ ಊಟವನ್ನು ಇಂದು ಆಯೋಜಿಸಿದ್ದು ಲಕ್ಷಾಂತರ ಜನರು ಭಾಗಿಯಾಗುವ ಸಾಧ್ಯತೆಗಳಿವೆ.
ಮಂಡ್ಯದ ಗೆಜ್ಜಲಗೆರೆಯಲ್ಲಿ ೧೫ ಎಕರೆ ಪ್ರದೇಶದಲ್ಲಿ ಪೆಂಡಾಲ್ ಹಾಕಿದ್ದು ಕಳೆದ ಹಲವು ದಿನಗಳಿಂದ ಬೀಗರ ಊಟಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನೂರಾರು ಮಂದಿ ಕಾರ್ಮಿಕರು ಹಗಲಿರುಳು ಭರ್ಜರಿ ಬಾಡೂಟಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಬೀಗರ ಊಟಕ್ಕಾಗಿ ಬರೋಬ್ಬರಿ ೭ ಸಾವಿರ ಕೆ.ಜಿ ಮಟನ್, ೭ ಸಾವಿರ ಕೆ.ಜಿ ಚಿಕನ್ ಸೇರಿದಂತೆ ೧೪ ಸಾವಿರ ಕೆ.ಜಿ ಮಾಂಸದೂಟ ಮಾಡಲಾಗಿದೆ. ಇದರ ಜೊತೆಗೆ ಮಂಡ್ಯದ ನಾಟಿ ಸ್ಟೈಲ್‌ನಲ್ಲಿ ಅಂಬರೀಷ್ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಆಪ್ತರು ಮತ್ತು ಮಂಡ್ಯ ಜಿಲ್ಲೆಯ ಜನತೆಗೆ ಬೀಗರ ಊಟ ಹಾಕಿಸುವ ಮೂಲಕ ಮಂಡ್ಯದ ಜನರು ಹೃಯದಲ್ಲಿದ್ದಾರೆ ಎನ್ನುವುದನ್ನು ಸಾರುವ ಪ್ರಯತ್ನ ನಡೆದಿದೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಗೆಜ್ಜಲಗೆರೆಯಲ್ಲಿ ೧೫ ಎಕರೆ ಪ್ರದೇಶದಲ್ಲಿ ಪೆಂಡಾಲ್ ಹಾಕಿ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಹಾಕಿಸಲು ತಯಾರಿ ಮಾಡಿಕೊಳ್ಳಲಾಗಿದೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಮಂಡ್ಯದ ಹಲವು ನಾಯಕರು ಬೀಗರ ಊಟ ಕಾರ್ಯಕ್ರಮವನ್ನು ಆಯೋಜಿಸಲು ಹಲವು ದಿನಗಳಿಂದ ಕೆಲಸ ಮಾಡಿದ್ದಾರೆ.
ಇಂದು ಬೆಳಗ್ಗೆ ಅಭಿಷೇಕ್ ಅಂಬರೀಷ್, ಅವೀವಾ ಸೇರಿದಂತೆ ಕುಟುಂಬದ ಸದಸ್ಯರು ಬೀಗರ ಊಟ ಆಯೋಜಿಸಲಾಗಿರುವ ಗೆಜ್ಜಲಗೆರೆಗೆ ತೆರಳಿ ಅಭಿಮಾನಿಗಳಿಗೆ ತಮ್ಮ ಪ್ರೀತಿ ವಿಶ್ವಾಸ ತೋರಲು ನಿರ್ಧರಿಸಿದ್ಧಾರೆ.