ಮಂಡ್ಯದ ಕುರುಬರ ವಿದ್ಯಾರ್ಥಿ ನಿಲಯಕ್ಕೆ ಕಲ್ಲು ತೂರಾಟ, ಪ್ರತಿಭಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೧: ಮಂಡ್ಯ ನಗರದ ಬಿಎಂ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ದಾವಣಗೆರೆ ಜಿಲ್ಲಾ ಕುರುಬರ ಸಂಘ ಹಾಗೂ ಸಮಾಜದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕುರುಬ ಸಮಾಜದ ಮುಖಂಡರು, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‍ರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಮಾಜದ ಮುಖಂಡ, ನಿವೃತ್ತ ಉಪ ನೊಂದಣಾಧಿಕಾರಿ ಮಲ್ಲಿಕಾರ್ಜುನಪ್ಪ, ಕಳೆದ 29ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜದ ವಿವಾದದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಮೆರವಣಿಗೆ ನಡೆಸಲಾಗುತ್ತಿತು. ಈ ವೇಳೆ ಕೆಲವು ಕಿಡಿಗೇಡಿಗಳು ಮಂಡ್ಯ ನಗರದ ಬಿಎಂ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲುತೂರಾಟ ಮಾಡಿ ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ದು, ಇಂತಹ ಕಿಡಿಗೇಡಿಗಳ ವಿರುದ್ದ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಸಮಾಜದ ಮುಖಂಡ ಎಸ್.ಎಸ್.ಗೀರಿಶ ಮಾತನಾಡಿ, ಕಟ್ಟಡದ ಮೇಲೆ ಇದ್ದ ಸಂಗೊಳ್ಳಿ ರಾಯಣ್ಣ, ಕನಕದಾಸರ ಭಾವಚಿತ್ರಕ್ಕೆ ಅವಮಾನ  ಮಾಡಿದ್ದಲ್ಲದೇ ಅಲ್ಲಿನ ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರ ನಡೆಸಿದ್ದರು. ರಾಜಕೀಯ ದುರುದೇಶದಿಂದ ಈ ವಿವಾದ ಸೃಷ್ಠಿಸಲಾಗಿದೆ. ಇಂತಹ ದಬ್ಬಾಳಿಕೆ, ನೀಚ ಕೃತ ಎದುರಿಸಲು ರಾಜ್ಯದಲ್ಲಿರುವ ಕುರುಬ ಸಮಾಜ ಶಕ್ತವಾಗಿದೆ. ಕುರುಬ ಸಮಾಜದ ಸಹನೆ, ತಾಳ್ಮೆಯನ್ನು ಪರೀಕ್ಷಿಸಬೇಡಿ. ಒಂದು ವೇಳೆ ಇದೇ ರೀತಿ ವರ್ತನೆ ಮುಂದುವರೆದರೆ ನಮ್ಮಗಳ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಕುಂಬಳೂರು ವಿರೂಪಾಕ್ಷಪ್ಪ, ಕೆ.ರೇವಣಸಿದ್ದಪ್ಪ, ಹೆಚ್.ಬಿ.ಗೋಣೆಪ್ಪ, ಪರಶುರಾಮ, ಬಿ.ದಿಳ್ಳೆಪ್ಪ, ಪರಶುರಾಮ, ಪ್ರೊ.ಬಿ.ಯಲ್ಲಪ್ಪ, ಮಳಲಕೆರೆ ಪ್ರಕಾಶ್, ಸುನಂದಮ್ಮ, ಜಡಗನಹಳ್ಳಿ ಚಿಕ್ಕಣ್ಣ, ಹೆಚ್.ಜಿ.ಸಂಗಪ್ಪ, ಜೆ.ಕೆ.ಕೊಟ್ರಬಸಪ್ಪ, ದೀಪಕ್, ಜಡಗನಹಳ್ಳಿ ವಿರೂಪಾಕ್ಷಪ್ಪ, ಶ್ರೀನಿವಾಸ್, ಆನಂದ್, ಪುರಂದರ ಲೋಕಿಕೆರೆ, ಅನಂತಪ್ಪ ಇತರರು ಇದ್ದರು.