ಮಂಡ್ಯದಲ್ಲಿ ಮೋದಿ ಅಬ್ಬರ

ಬೆಂಗಳೂರು,ಮಾ.೧೨:ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದು, ರೋಡ್ ಶೋ ವೇಳೆ ಪ್ರಧಾನಿ ಅವರ ಮೇಲೆ ನೆರೆದಿದ್ದ ಜನಸ್ತೋಮ ಪುಷ್ಪ ಮಳೆಯನ್ನೇ ಸುರಿಸಿದರು.
ಪ್ರಧಾನಿಗಳ ಈ ರೋಡ್ ಶೋ, ಮಂಡ್ಯದಲ್ಲಿ ಮೇನಿಯಾವನ್ನೇ ಸೃಷ್ಟಿಸಿ, ಸಂಚಲನ ಮೂಡಿಸಿತು. ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದಾ ವೃತ್ತದವರೆಗೂ ೧.೮ ಕಿ.ಮೀ ಕಾರಿನಲ್ಲಿ ನಿಂತು ರೋಡ್ ಶೋ ನಡೆಸಿದ ಪ್ರಧಾನಿಗಳು, ನೆರೆದಿದ್ದ ಜನಸ್ತೋಮ ಕಂಡು ಹರ್ಷಚಿತ್ತರಾಗಿ ಅವರತ್ತ ಕೈ ಬೀಸಿ ಸಂತಸ ವ್ಯಕ್ತಪಡಿಸಿದರು.
ಮೋದಿ ಅವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಸಾವಿರಾರು ಮಂದಿ ಮೋದಿ ಅವರು ಬರುತ್ತಿದ್ದಂತೆಯೇ ಹರ್ಷೋದ್ಗಾರ ಮಾಡಿ ಅವರಿಗೆ ಪುಷ್ಪವೃಷ್ಠಿ ಮಾಡಿ ಬೀಗಿದರು.
ರೋಡ್ ಶೋ ಉದ್ದಕ್ಕೂ ಪ್ರಧಾನಿ ಮೋದಿ ಅವರಿಗೆ ಪುಷ್ಪಾರ್ಚನೆಯ ಅದ್ದೂರಿ ಸ್ವಾಗತ ನೀಡಿದ ಜನರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಕಾರಿನಲ್ಲಿ ನಿಧಾನವಾಗಿ ಚಲಿಸುತ್ತ ಕೈ ಗಳನ್ನು ಬೀಸುತ್ತ ಜನರನ್ನು ಹುರಿದುಂಬಿಸಿದ ಪ್ರಧಾನಿಗಳು, ಕಾರಿನ ಮೇಲೆ ಬಿದ್ದಿದ್ದ ಹೂವುಗಳನ್ನು ಜನರತ್ತ ಎಸೆಯುವ ಮೂಲಕ ಧನ್ಯವಾದವನ್ನೂ ಸಮರ್ಪಿಸಿದರು. ಪ್ರಧಾನಿಗಳ ರೋಡ್ ಶೋ ವೇಳೆ ರಸ್ತೆಯ ಎರಡೂ ಕಡೆ ಸೇರಿದ್ದ ಜನ ಮೋದಿ ಅವರನ್ನು ನೋಡಲು ಮುಗಿ ಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಶ್ವೇತ ವಸ್ತ್ರಧಾರಿಯಾಗಿದ್ದ ಮೋದಿ ಅವರು ರೋಡ್ ಶೋ ಮೂಲಕ ಜನರನ್ನು ಮೋಡಿ ಮಾಡಿದರು.

ಸಕ್ಕರೆ ನಾಡಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ಮೂಲಕ ಮತ ಬೇಟೆ ನಡೆಸಿ,ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸ್ತೋಮದತ್ತ ಹರ್ಷಚಿತ್ತರಾಗಿ ಕೈ ಬೀಸಿದರು.


ಶತಾಯ-ಗತಾಯ ಮುಂದಿನ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ಸಕ್ಕರೆ ನಾಡು ಮಂಡ್ಯದಲ್ಲಿ ಕಮಲ ಅರಳಿಸುವ ಶಪಥ ತೊಟ್ಟಿರುವ ಬಿಜೆಪಿ, ಇಂದು ಪ್ರಧಾನಿ ನರೇಂದ್ರಮೋದಿ ಅವರ ರೋಡ್ ಶೋನಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನ ಮಾಡುವ ಜತೆಗೆ ಮತ ಶಿಕಾರಿ ನಡೆಸಿತು,
ಮಂಡ್ಯದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ ಮುಂದಿನ ಚುನಾವಣೆಯಲ್ಲಿ ಬದಲಾವಣೆಗೆ ನಾಂದಿ ಹಾಡಲು ಸಜ್ಜಾಗಿರುವ ಕಾರ್ಯಕರ್ತರಲ್ಲಿ ಪ್ರಧಾನಿಗಳ ರೋಡ್ ಶೋ ಮತ್ತಷ್ಟು ಹುಮ್ಮಸ್ಸು-ಹುರುಪು ತುಂಬಿದ್ದು, ಚುನಾವಣೆಯಲ್ಲಿ ಜನರ ಮನ ಗೆಲ್ಲುವ ಬಿಜೆಪಿಯ ಆಶಯಕ್ಕೆ ಪ್ರಧಾನಿಗಳ ರೋಡ್ ಶೋ ಶಕ್ತಿ ತುಂಬಿದೆ.
ಪ್ರಧಾನಿ ನರೇಂದ್ರಮೋದಿ ಅವರು ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ರಾಜ್ಯದ ಹಲವು ಭಾಗಗಳಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ, ಶಂಕುಸ್ಥಾಪನೆ ಕಾಂiiಕ್ರಮಗಳಲ್ಲಿ ಭಾಗಿಯಾಗಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪರವಾದ ಅಲೆ ಮೂಡಿಸುವ ಪ್ರಯತ್ನ ನಡೆಸಿದ್ದು, ಅದರಂತೆ ಇಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಕಾರ್ಯಕ್ರಮ ಸಂದರ್ಭದಲ್ಲಿ ಮಂಡ್ಯದಲ್ಲಿ ರೋಡ್ ಶೋ ಮೂಲಕ ಬಿಜೆಪಿಯ ಶಕ್ತಿ ಪ್ರದರ್ಶನ ಅನಾವರಣಕ್ಕೂ ಪ್ರಧಾನಿಗಳು ಸಾಕ್ಷಿಯಾದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಎಲ್ಲ ರೀತಿಯ ರಾಜಕೀಯ ತಂತ್ರಗಳನ್ನು ಹೆಣೆದಿರುವ ಬಿಜೆಪಿ, ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಅಬ್ಬರದ ರೋಡ್ ಶೋ ಮೂಲಕ ಇಲ್ಲೆಲ ಬಿಜೆಪಿಯ ಚುನಾವಣಾ ಪ್ರಚಾರದ ರಣ ಕಹಳೆಯನ್ನು ಮೊಳಗಿಸಿದೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ವಿಮಾನನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ೧೧.೩೦ಕ್ಕೆ ಮಂಡ್ಯಾಗೆ ಆಗಮಿಸಿದರು.
ಕೇಸರಿಮಯ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಇಡೀ ಮಂಡ್ಯ ನಗರ ಕೇಸರಿಮಯವಾಗಿದ್ದು, ಮಂಡ್ಯದ ಮುಖ್ಯ ರಸ್ತೆ ಸೇರಿದಂತೆ ಎಲ್ಲ ವೃತ್ತಗಳಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ಬಿಜೆಪಿಯ ಬಾವುಟಗಳು ಹಾರಾಡುತ್ತಿದ್ದು, ಪ್ರಧಾನಿಗಳನ್ನು ಸ್ವಾಗತಿಸುವ ಫ್ಲೆಕ್ಸ್‌ಗಳನ್ನು ಎಲ್ಲೆಡೆ ಹಾಕಲಾಗಿದ್ದು, ಇಡೀ ಮಂಡ್ಯ ಕೇಸರಿಮಯವಾಗಿದೆ.
ಬಿಗಿ ಭದ್ರತೆ
ಪ್ರಧಾನಿಗಳ ರೋಡ್ ಶೋ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ಐವರು ಎಸ್ಪಿಗಳು, ೨೪ ಡಿವೈಎಸ್ಪಿಗಳು, ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ಗಳೂ ಸೇರಿದಂತೆ ೨೩೦೦ ಪೊಲೀಸ್ ಸಿಬ್ಬಂದಿ, ೧೪ ಮಂದಿ ಡಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ನೂರಾರು ಜನ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಪ್ರಧಾನಿಗಳ ಭೇಟಿ ಹಿನ್ನೆಲೆಯಲ್ಲಿ ವಾಹನಗಳ ಓಡಾಟದ ಮಾರ್ಗಗಳಲ್ಲೂ ಬದಲಾವಣೆಗಳನ್ನು ಮಾಡಲಾಗಿತ್ತು,