ಮಂಡ್ಯದಲ್ಲಿ ಮುಂದಿನ ನುಡಿ ಹಬ್ಬ

ಹಾವೇರಿ, ಜ.೮- ಮುಂದಿನ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯ ಜಿಲ್ಲೆಯ ಪಾಲಾಗಿದೆ. ಹಾವೇರಿಯಲ್ಲಿ ನಡೆಯುತ್ತಿರುವ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆಯಲ್ಲಿ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲು ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆ ನಡುವೆ ಪೈ ಪೋಟಿ ನಡೆದು ಅಂತಿಮವಾಗಿ ಕಾರ್ಯಕಾರಿಣಿಯಲ್ಲಿ ಮಂಡ್ಯ ಪರವಾಗಿ ೧೭ ಮತಗಳು ಮತ್ತು ಬಳ್ಳಾರಿ ಪರವಾಗಿ ೧೬ ಮತಗಳು ಬಂದು ಮಂಡ್ಯ ಜಿಲ್ಲೆ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿಣಿ ನಂತರ ಕ.ಸಾ.ಪ ಅಧ್ಯಕ್ಷ ಮಹೇಶ್ ಜೋಷಿ, ಸುದ್ದಿಗಾರರೊಂ ದಿಗೆ ಮಾತನಾಡಿ, ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ೯ ಜಿಲ್ಲೆಗಳಿ ಮನವಿ ಮಾಡಿದ್ದವು, ಅಂತಿಮವಾಗಿ ಕಾರ್ಯಕಾರಿಣಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅತೀ ಹೆಚ್ಚು ಬೆಂಬಲ ವ್ಯಕ್ತವಾಗಿದ್ದು, ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಿ ನಡೆಸಬೇಕು ಎಂಬ ಬಗ್ಗೆ ಮತದ ಮೂಲಕ ಆಯ್ಕೆ ಮಾಡುವ ತೀರ್ಮಾನಕ್ಕೆ ಕಾರ್ಯಕಾರಿಣಿ ಬಂದಿದ್ದು, ಅದರಂತೆ ೪೬ ಕಾರ್ಯಕಾರಿಣಿ ಸದಸ್ಯರು ಮತ ಚಲಾಯಿಸಿದ್ದು, ಈ ಪೈಕಿ ೧೭ ಮತಗಳು ಮಂಡ್ಯ ಜಿಲ್ಲೆಗೆ, ೧೬ ಮತಗಳು ಬಳ್ಳಾರಿ ಜಿಲ್ಲೆಗೆ ಬಂದವು ಎಂದು ಅವರು ವಿವರ ನೀಡಿದರು.
ಹಾವೇರಿಯ ಅಕ್ಷರ ಜಾತ್ರೆಗೆ ಇಂದು ತೆರೆ
ಯಾಲಕ್ಕಿ ನಗರ, ಶರಣ ಸಂತರ ವೀಡು ಹಾವೇರಿಯಲ್ಲಿ ನಡೆದಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಮೂರು ದಿನಗಳ ಅಕ್ಷರ ಜಾತ್ರೆಗೆ ಸಾವಿರಾರು ಕನ್ನಡಾಭಿಮಾನಿಗಳು, ಕನ್ನಡಾಸಕ್ತರು, ಸಾಹಿತಿಗಳು ಸಾಕ್ಷಿಯಾದರು
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹಾವೇರಿಯಲ್ಲಿ ನಡೆದ ನುಡಿ ಹಬ್ಬಕ್ಕೆ ನಾಡಿನ ಎಲ್ಲೆಡೆಯಿಂದ ಜನಸಾಗರವೇ ಹರಿದು ಬಂದಿತ್ತು. ಮೂರು ದಿನಗಳ ನುಡಿ ಹಬ್ಬದಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಕಣ್ಣು ಆಯೋಜಿಸಿದೆಲ್ಲೆಡೆ ಜನವೋ ಜನ, ಹಾವೇರಿಯಲ್ಲಿ ಹಿಂದೆಂದೂ ಯಾವುದೇ ಕಾರ್ಯಕ್ರಮಕ್ಕೂ ಇಷ್ಟೊಂದು ಜನಸಾಗರ ಸೇರರಿಲಿಲ್ಲ. ಈ ಸಾಹಿತ್ಯ ಸಮ್ಮೇಳನ ಒಂದು ದಾಖಲೆಯೇ ಸರಿ.
ಸಮ್ಮೇಳನದ ಮೊದಲ ದಿನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಸುಮಾರು ೧ ಲಕ್ಷ ಮಂದಿ ಸೇರಿದ್ದರು. ಸಂಭ್ರಮ-ಸಡಗರದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಮೊದಲ ದಿನದ ಸಂಭ್ರಮವನ್ನು ಮೀರಿಸುವಂತೆ ೨ನೇ ದಿನ ೫ ಲಕ್ಷಕ್ಕೂ ಹೆಚ್ಚು ಜನ ಸಮ್ಮೇಳನದಲ್ಲಿ ಭಾಗಿಯಾಗಿ ದಾಖಲೆ ಬರೆದರು. ೩ನೇ ದಿನವಾದ ಭಾನುವಾರ ಸಹ ಲಕ್ಷಾಂತರ ಸಾಹಿತ್ಯಾಸಕ್ತರು ನುಡಿ ಹಬ್ಬದಲ್ಲಿ ಭಾಗಿಯಾದರು.
ಹಾವೇರಿ ನಗರದಲ್ಲಿ ಹೊರವಲಯದ ಸಾಹಿತ್ಯ ಸಮ್ಮೇಳನದ ವೇದಿಕೆವರೆಗೂ ಇರುವೆ ಸಾಲಿನಂತೆ ಜನಸ್ತೋಮ ಕಂಡು ಬಂತು. ಲಕ್ಷಾಂತರ ಮಂದಿಗೆ ಸಮರ್ಪಕವಾಗಿ ಊಟ ಉಪಾಹಾರದ ವ್ಯವಸ್ಥೆಗಳನ್ನೂ ಮಾಡಲಾಗಿತ್ತು. ತರಹಾವೇರಿ ಭಕ್ಷ್ಯ ಭೋಜನಗಳು, ಸಿಹಿ ತಿಂಡಿಗಳನ್ನು ಈ ಮೂರು ದಿನ ಸಾಹಿತ್ಯಾಸಕ್ತರಿಗೆ ಉಣಬಡಿಸಲಾಯಿತು. ಒಟ್ಟಾರೆ, ಈ ಮೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕನ್ನಡಾಭಿಮಾನಿಗಳು ಸಮ್ಮೇಳನಕ್ಕೆ ಸಾಕ್ಷಿಯಾದರು.
ಪುಸ್ತಕ ಖರೀದಿಗೆ ಮುಗಿ ಬಿದ್ದ ಜನ:
ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿರುವಪುಸ್ತಕ ಪ್ರದರ್ಶನಕ್ಕೆ ಜನ ಸಾಗರವೇ ಹರಿದುಬಂತು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಪುಸ್ತಕ ಪ್ರಕಾಶಕರು ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗೆ ಜಾಗ ಕಾಯ್ದಿರಿಸಿ ಸಮ್ಮೇಳನ ಹಿನ್ನೆಲೆಯಲ್ಲಿ ಶೇ.೫೦, ಶೇ.೩೦, ಶೇ.೨೦, ಶೇ. ೧೦ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಿದರು.
ಪ್ರಸಾರಾಂಗ ವಿವಿ ಹಂಪಿ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಕಟಣೆಗಳಿಗೆ ಶೇ.೫೦ ರಿಯಾಯಿತಿ ದರ ನಿಗದಿಪಡಿಸಿದ್ದರಿಂದ ಪುಸ್ತಕಗಳು ಹೆಚ್ಚು ಮಾರಾಟವಾದವು.
ಕನ್ನಡ ಸಾಹಿತ್ಯ ಪರಿಷತ್, ಸಪ್ನ, ಅಂಕಿತ ಪುಸ್ತಕ, ಜೀರುಂಡೆ ಪುಸ್ತಕ ಹಾಗು ಇತರ ಕೆಲ ಪ್ರಕಾಶಕರು ಎರಡಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆ ಹಾಕಿ ಪುಸ್ತಕ ಮಾರಾಟ ಮಾಡಿದರು.ಹೊಸತು, ಅಭಿನವ, ಆಕೃತಿ, ಛಂದ, ಸಾವಣ್ಣ, ಲಡಾಯಿ, ಲಂಕೇಶ, ಕ್ರಿಯಾ ಮಾಧ್ಯಮ, ನ್ಯಾಷನಲ್ ಬುಕ್ ಟ್ರಸ್ಟ್, ಅಕ್ಷರ ಸಂಗಾತ, ಚಿಂತನ, ಚಿತ್ತಾರ, ಸಿವಿಜಿ ಪಬ್ಲಿಕೇಶನ್, ಧಾತ್ರಿ, ವೈಷ್ಣವಿ, ಚೈತ್ರ, ಆಕಾರ ಸೇರಿದಂತೆ ಹಲವು ಪ್ರಕಾಶನಗಳ ಪುಸ್ತಕ ಮಳಿಗೆಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ವಿವಿಯ ಗೊಟಗೇಡಿಯ ವಿಸ್ತರಣೆ ಮತ್ತು ಸಲಹಾ ಕೇಂದ್ರದಲ್ಲಿ ಗ್ರಾಮೀಣ ಚರಿತ್ರೆಯ ಪುಸ್ತಕಗಳು ಗಮನ ಸೆಳೆದವು. ಎಐಡಿಎಸ್ ಓ ರಾಜ್ಯ ಸಮಿತಿ ಪ್ರಕಟಿಸಿದ ಹಲವಾರು ಪುಸ್ತಕಗಳನ್ನು ಸಮ್ಮೇಳನ ಹಿನ್ನೆಲೆಯಲ್ಲಿ ೨೦೦ ರೂ.ಗೆ ಎಂಟು ಪುಸ್ತಕಗಳು ಎಂದು ಕಡಿಮೆ ದರದಲ್ಲಿ ಮಾರಾಟ ಮಾಡಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸುವ ಪರಿ ಮೆಚ್ಚುಗೆ ಗಳಿಸಿತು.
ವಚನ ಸಾಹಿತ್ಯ ಕುರಿತಂತೆ ಬಸವ ಸಮಿತಿಯ ಪ್ರಕಟಣೆಗಳು ವಿಶೇಷ ರಿಯಾಯಿತಿಗೆ ಮಾರಾಟವಾದವು. ಸರ್ಕಾರಿ ನೌಕರರ ಪುಸ್ತಕ ಪ್ರಕಾಶನದ ಪುಸ್ತಕಗಳು ಸಹ ಮಾರಾಟಕ್ಕಿದ್ದವು. ಗದಗ ಜಿಲ್ಲೆಯ ಕಲ್ಲೂರ ಗ್ರಾಮದ ನಿವೃತ್ತ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಸಾಹಿತಿ ಎ.ಎಸ್.ನದಾಫ್ ಮತ್ತು ಲಕ್ಷ್ಮೇಶ್ವರದ ಡಾ.ಸಂಗಮೇಶ ತಮ್ಮನಗೌಡ್ರ ಅವರು ಖುದ್ದು ತಾವೇ ತಮ್ಮ ನೀಲ ಪ್ರಕಾಶನ ಮತ್ತು ಕಲ್ಮೇಶ್ವರ ಪ್ರಕಾಶನ ಮಳಿಗೆಯಲ್ಲಿ ಕುಳಿತು ಪುಸ್ತಕ ಮಾರಾಟ ಮಾಡಿದರು.
ನಾನಾ ಇಲಾಖೆಗಳಿಂದ ಮಾಹಿತಿ: ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕೈಮಗ್ಗ ಜವಳಿ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ, ಜಿಲ್ಲಾ ಆಯುಷ್ ಇಲಾಖೆಗಳ ಮಳಿಗೆಗಳಿಗೆ ಮತ್ತು ನರೇಗಾ ಮಾಹಿತಿ ಕೇಂದ್ರಕ್ಕೆ ಜನರು ಭೇಟಿ ನೀಡಿ ಮಾಹಿತಿ ಪಡೆದರು.
ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಫಲ-ಪುಷ್ಪ ಸಹ ಜನರ ಮನ ಸೂರೆಗೊಂಡಿದ್ದು, ಕಲ್ಲಂಗಡಿ ಹಣ್ಣಿನಲ್ಲಿ ಬಿಡಿಸಿದ್ದ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಚಿತ್ರ ಎಲ್ಲರ ಮನ ಗೆದ್ದಿತು.
ವಿವಿಧ ಹಣ್ಣು ತರಕಾರಿಗಳಲ್ಲಿ ಪುನೀತ್‌ರವರ ನಾನಾ ಭಾವ-ಭಂಗಿಯ ಚಿತ್ರಗಳು ಜ್ಞಾನಪೀಠ ಸಾಹಿತಿಗಳು, ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಮಹನೀಯರ ಚಿತ್ರಗಳು ಜನರ ಮನ ಗೆದ್ದವು. ತಾಯಿ ಭುವನೇಶ್ವರಿ, ಶಿವಲಿಂಗ, ಪ್ರಾಣಿ-ಪಕ್ಷಿಗಳ ಚಿತ್ರವನ್ನೂ ತರಕಾರಿಗಳಲ್ಲಿ ಕೆತ್ತಲಾಗಿತ್ತು. ಫಲ-ಪುಷ್ಪ ಪ್ರದರ್ಶನ ನೋಡಲು ಸಾವಿರಾರು ಜನ ಮುಗಿಬಿದ್ದರು.

ಟಿ ಶರ್ಟ್ ಮಾರಾಟ..!
ಕರ್ನಾಟಕ ಬಲ ತಂಡ ಮತ್ತು ಟೋಟಲ್ ಕನ್ನಡದಿಂದ ಕನ್ನಡ ನಾಡು ನುಡಿಯ ಅಕ್ಷರದ ಟಿ- ಶರ್ಟ್ ಮಾರಾಟ, ಡಿವಿಡಿ ಮಾರಾಟ, ಕನ್ನಡ ಶಾಲುಗಳ ಮಾರಾಟ ನಡೆಯಿತು.

ಜಿಲ್ಲೆಯಲ್ಲಿ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.೬ ಆರಂಭವಾಗಿದ್ದು, ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ ೭೦ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇದರಿಂದ ಬಾಣಸಿಗರು ಮತ್ತೆ ಊಟದ ತಯಾರಿ ಮಾಡಿದರು. ನಿರೀಕ್ಷೆಗೂ ಮಿರಿ ಜನಸಾಗರ ಬಂದಿರುವ ಹಿನ್ನೆಲೆ ಬಾಣಸಿಗರಿಂದ ಊಟ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ವೇಳೆ ಸ್ವತಃ ಪೊಲೀಸರೇ ಊಟ ನೀಡುತ್ತಿದ್ದ ದೃಶ್ಯ ಕಂಡಿತು.

ಸಂಜೆ ಸಮಾರೋಪ ಸಮಾರಂಭ..!
ಸಮಾರೋಪ ಸಮಾರಂಭವು ಇಂದು ಸಂಜೆ ೫ ಗಂಟೆಗೆ ಜರುಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೌರವ ಉಪಸ್ಥಿತಿ ಇರಲಿದ್ದಾರೆ. ಕನ್ನಡ ಭಾಷೆಗೆ ಕಾನೂನು ರಚನೆ ಸೇರಿದಂತೆ ಇನ್ನಿತರ ಮಹತ್ವದ ನಿರ್ಣಯಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಗೌರವ ಅತಿಥಿಗಳಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರಹ್ಲಾದ ಜೋಶಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಸಮಾರೋಪ ಸಮಾರಂಭದ ಭಾಷಣವನ್ನು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮಾಡಲಿದ್ದು, ಆನಂತರ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಹಿಸಲಿದ್ದಾರೆ.