ಮಂಡ್ಯದಲ್ಲಿ ಆಸ್ಪತ್ರೆ ಸ್ಥಾಪನೆಗೆ ಎಸ್ಸೆಂಕೆಗೆ ಗೂಳಿಗೌಡ ಮನವಿ

ಬೆಂಗಳೂರು,ಜ.೨೧-ಮಂಡ್ಯದಲ್ಲಿ ೧೦೦ ಬೆಡ್‌ಗಳ ಟ್ರಾಮಾ ಕೇರ್ ಆಸ್ಪತ್ರೆ ಸ್ಥಾಪನೆಯ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಶಿಫಾರಸು ಮಾಡುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಿಗೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮುಖಂಡರ ಜತೆ ನಿನ್ನೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕಷ್ಣರವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಈಗ ಸೂಪರ್ ಫಾಸ್ಟ್ ಮಾರ್ಗವಾಗಿದೆ. ಇಲ್ಲಿ ವಾಹನಗಳು ಹೆಚ್ಚಾಗಿ ಓಡಾಡುವುದರಿಂದ ಅಪಘಾತಗಳು ಸಂಭವಿಸಿದರೆ ಮೈಸೂರು ಅಥವಾ ಬೆಂಗಳೂರಿಗೆ ಗಾಯಾಳುಗಳನ್ನು ದಾಖಲಿಸಬೇಕಾದ ಪರಿಸ್ಥಿತಿ ಇದೆ. ಇದು ಬಹಳವೇ ದೂರವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಸೇರಿದಂತೆ ಕೆಲವು ಅಗತ್ಯ ತ್ವರಿತ ಚಿಕಿತ್ಸೆಯ ಅಗತ್ಯತೆ ಇರುತ್ತದೆ.
ಆದರೆ, ಬೆಂಗಳೂರು ಇಲ್ಲವೇ ಮೈಸೂರಿಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹಾನಿಯಾಗುವ ಸಂಭವವೂ ಹೆಚ್ಚಿರುತ್ತದೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದೆ. ಇದಕ್ಕಾಗಿ ಮಂಡ್ಯ ನಗರದಲ್ಲಿ ೧೦೦ ಬೆಡ್‌ಗಳ ಹೊಸ ಟ್ರಾಮಾ ಕೇರ್ ಆಸ್ಪತ್ರೆಯನ್ನು ತೆರೆಯಬೇಕು ಎಂದು ಅವಶ್ಯಕತೆಯ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು.
ಮೈಸೂರು-ಬೆಂಗಳೂರು ನಗರಗಳ ಮಧ್ಯದಲ್ಲಿ ಇರುವ ಮಂಡ್ಯ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇದ್ದು, ಸುಮಾರು ೧೫೦ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಸದಾ ಲಭ್ಯವಿರುತ್ತಾರೆ. ಮಂಡ್ಯ ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಂತೆ ಇರುವ ೫ ಎಕರೆ ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತಿರುವುದರಿಂದ ಈ ಜಾಗದಲ್ಲಿ ೧೦೦ ಬೆಡ್‌ಗಳ ಟ್ರಾಮಾ ಕೇರ್ ಆಸ್ಪತ್ರೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತ್ವರಿತವಾಗಿ ಹೊಸದಾಗಿ ಪ್ರಾರಂಭಿಸಬಹುದಾಗಿದೆ ಎಂದು ಇವರುಗಳು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಎಸ್. ಗುರುಚರಣ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಣ್ಣ, ಮಾಜಿ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದ್ಲೂರು ರಾಮಕೃಷ್ಣ, ಮುಖಂಡರಾದ ಜೋಗಿಗೌಡ, ಸಂದರ್ಶ್, ರಾಘು ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.