ಮಂಡೆಕೋಲು ಗ್ರಾಮದಲ್ಲಿ ನಿರಂತರ ೧೦ ದಿನಗಳಿಂದ ಕಾಡಾನೆ ದಾಳಿ-ಆತಂಕದಲ್ಲಿ ಗ್ರಾಮದ ಜನತೆ

ಸುಳ್ಯ , ಮೇ.೧- ಗಡಿ ಗ್ರಾಮವಾದ ಮಂಡೆಕೋಲಿನ ವಿವಿಧ ಭಾಗಗಳು ಮತ್ತೆ ಕಾಡಾನೆ ಧಾಳಿಯಿಂದ ನಲುಗಿ ಹೋಗಿದೆ. ಗ್ರಾಮದ ದೇವರಗುಂಡ, ಮೂರುರು, ಅಕ್ಕಪ್ಪಾಡಿ, ಕಾಪಿನಡ್ಕ, ಕೇನಾಜೆ, ಕಣೆಮರಡ್ಕ, ಕಜಳ ಮತ್ತಿತರ ಭಾಗಗಳಲ್ಲಿ ಕಳೆದ ೧೦ ದಿನಗಳಿಂದ ಕಾಡಾನೆ ಹಾವಳಿಯಿಂದ ನಲುಗಿ ಹೋಗಿದೆ.
ಸಂಜೆಯ ವೇಳೆಗೆ ೭ ಆನೆಗಳ ಹಿಂಡು ಮಂಡೆಕೋಲು ಸಂಪರ್ಕ ಕಲ್ಪಿಸುವ ಪರಪ್ಪೆ ತೂಗು ಸೇತುವೆಯ ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ ಕಂಡು ಬಂದಿದೆ. ಮರಿ ಆನೆ ಸಹೀತ ಆನೆಗಳ ಹಿಂಡು ಇದೇ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು ನಿರಂತರ ದಾಳಿ ನಡೆಸುತಿದೆ. ಮನೆಯ ಸಮೀಪಕ್ಕೂ ದಾಂಗುಡಿಯಿಡುವ ಗಜ ಪಡೆಗಳು ಭೀತಿ ಹುಟ್ಟಿಸುತಿವೆ. ಪ್ರದೇಶದಲ್ಲಿ ಆನೆಗಳ ನಿರಂತರ ಹಾವಳಿಯಿಂದ ಕೃಷಿಗೆ ವ್ಯಾಪಕ ನಷ್ಟ ಉಂಟಾಗಿದೆ. ತೋಟಗಳಿಗೆ ನುಗ್ಗುವ ಆನೆಗಳು ಕೃಷಿಕರ ಅಡಕೆ, ಬಾಳೆ,ತೆಂಗು ,ಕೊಕ್ಕೊ ಗಿಡಗಳಿಗೆ ಹಾನಿ ಮಾಡುವುದರ ಜೊತೆಗೆ ಕೃಷಿಗೆ ನೀರು ಹಾಯಿಸುವ ಪೈಪ್ ಮತ್ತು ಇತರ ಪರಿಕರಗಳನ್ನು ನಾಶ ಮಾಡಿವೆ. ಪದೇ ಪದೇ ತೋಟಕ್ಕೆ ಬರುವ ಆನೆಗಳನ್ನು ಓಡಿಸಲು ಕಾರ್ಯಾಚರಣೆ ನಡೆಸಿದಾಗ ಆನೆಗಳು ಪಯಸ್ವಿನಿ ನದಿ ದಾಟಿ ಸಮೀಪದ ಕಾಡಿಗೆ ಲಗ್ಗೆ ಇಟ್ಟು ಸ್ವಲ್ಪ ಸಮಯದಲ್ಲೇ ಮರಳಿ ಬರುತ್ತವೆ. ಕೃಷಿ ಹಾನಿಯ ಜೊತೆಗೆ ಮನೆ ಸಮೀಪಕ್ಕೆ ಬರುವ ಕಾರಣ ಗಜ ಭೀತಿಯಲ್ಲಿ ಜನರು ಮನೆಯಿಂದ ಹೊರ ಬರಲು ಆಗದ ಸ್ಥಿತಿ ಉಂಟಾಗಿದೆ.