ಮಂಜೇಶ್ವರ ಶಾಸಕ ಕಮರುದ್ದೀನ್ ಕಣ್ಣೂರು ಆಸ್ಪತ್ರೆಗೆ ದಾಖಲು


ಕಾಸರಗೋಡು, ನ.೨೦- ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕರನ್ನು ಆಂಜಿಯೋಗ್ರಾಂ ತಪಾಸಣೆಗೆ ಒಳಪಡಿಸಲಾಗಿದೆ. ಹೃದ್ರೋಗ ವಲಯದ ತುರ್ತು ಘಟಕದಲ್ಲಿ ಶಾಸಕ ಚಿಕಿತ್ಸೆ ಪಡೆಯುತ್ತಿದ್ದು, ಆಂಜಿಯೋಗ್ರಾಂ ತಪಾಸಣಾ ವರದಿ ಬಂದ ಬಳಿಕ ಶಸ್ತ್ರಕ್ರಿಯೆ ನಡೆಸುವ ಹಾಗೂ ಮುಂದಿನ ಚಿಕಿತ್ಸೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಜೈಲಿನಲ್ಲಿ ಅನಾರೋಗ್ಯ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಇರುವುದಾಗಿ ವೈದ್ಯರು ತಿಳಿಸಿದ್ದು, ಬಳಿಕ ಕಣ್ಣೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.