
ಸಂಜೆವಾಣಿ ನ್ಯೂಸ್
ಮೈಸೂರು: ಜು.11:-ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ನುಗ್ಗಹಳ್ಳಿ ಕೊಪ್ಪಲಿನ ಸುರೇಶ್ ಎಂಬುವವರ ಕುಟುಂಬಕ್ಕೆ ಮಂಜೂರಾಗಿರುವ ನಿವೇಶನ ಕೊಡಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನುಗ್ಗಹಳ್ಳಿ ಕೊಪ್ಪಲಿನ ಸರ್ವೆ ನಂ.101ರಲ್ಲಿ ಪಂಚಾಯಿತಿ ವತಿಯಿಂದ ಸುರೇಶ್ ಅವರಿಗೆ ನಿವೇಶನ ಮಂಜೂರಾಗಿತ್ತು. ಸರ್ಕಾರದ ಆದೇಶದ ನಿವೇಶನದ ಹಕ್ಕುಪತ್ರ ಪಡೆದಿರುವವರು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ ಸುರೇಶ್ ಅವರ ತಾಯಿ ಕಮಲಮ್ಮ ಅವರಿಗೆ ಮಂಜೂರಾಗಿದ್ದ 37ನೇ ಸಂಖ್ಯೆಯ ನಿವೇಶನದ ಡಿಮ್ಯಾಂಡ್ ರಿಜಿಸ್ಟರ್‍ನಲ್ಲಿ ಅಕ್ರಮವಾಗಿ ನಿಂಗೇಗೌಡ.ಎಂ ಎಂಬುವರ ಹೆಸರು ಸೇರಿಸಿ ಗೊಂದಲ ಉಂಟು ಮಾಡಲಾಗಿದೆ. ಹೀಗಾಗಿ ಇದರ ಸಮಗ್ರ ತನಿಖೆ ನಡೆಸಿ ನಿಜವಾದ ಫಲಾನುಭವಿ ಕಮಲಮ್ಮ ಎಂಬುದನ್ನು ಖಚಿತಪಡಿಸಬೇಕೆಂದು ಒತ್ತಾಯಿಸಿದರು.
ಕಮಲಮ್ಮ ಅವರ ನಿವೇಶದಲ್ಲಿದ್ದ ಗುಡಿಸಲು ನೆಲಸಮ ಮಾಡಿ, ನಿವೇಶನದಲ್ಲಿದ್ದ ನೀಲಗಿರಿ ಮತ್ತು ತೆಂಗಿನ ಮರಗಳನ್ನು ಕೆಡವಿದ್ದು, ಸೂಕ್ತ ತನಿಖೆ ನಡೆಸಿ ಅದರ ಪರಿಹಾರವನ್ನು ಸುರೇಶ್ ಅವರಿಗೆ ನೀಡಬೇಕು. ನಿಂಗೇಗೌಡ ಎಂಬುವವರು ಸರ್ಕಾರ ನೀಡಿದ್ದ ನಿವೇಶನದಲ್ಲಿ ದೊಡ್ಡ ಮನೆ ನಿರ್ಮಿಸಿಕೊಂಡಿದ್ದರೂ ಕಮಲಮ್ಮ ಅವರಿಗೆ ನೀಡಿದ್ದ ನಿವೇಶನದಲ್ಲಿ ಅಕ್ರಮವಾಗಿ ತಮ್ಮ ಹೆಸರು ನಮೂದಿಸಿಕೊಂಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಇದರ ಖಾತೆ ರದ್ದು ಮಾಡಬೇಕು. ಕಮಲಮ್ಮ ಅವರ ಪುತ್ರ ಸುರೇಶ್ ಅವರಿಗೆ ನಿವೇಶನದ ಪೌತಿ ಖಾತೆ ಮಾಡಿಸಲು ಆದೇಶ ನೀಡಿ ಶಾಶ್ವತ ಸೂರು ಒದಗಿಸಬೇಕು. ನಿವೇಶನದ ದಾಖಲೆಗಳಲ್ಲಿ ಇಬ್ಬರ ಹೆಸರನ್ನು ನಮೂದಿಸಿ ಗೊಂದಲ ಮೂಡಿಸಿರುವ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನ್ಯಾಯ ದೊರಕಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನಿಡಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷೆ ಬಿ.ತಾರಾ, ಕೃಷ್ಣಮೂರ್ತಿ, ಶಶಿಕಲಾ, ಪಾರ್ವತಮ್ಮ, ಬಬಿತಾ, ಸುಶೀಲಮ್ಮ, ಇಂದ್ರಮ್ಮ, ಸ್ವಾಮಿ, ಪುಟ್ಟಮಾದಯ್ಯ, ಸತೀಶ, ರಾಜಮ್ಮ, ಭಾಗ್ಯಮ್ಮ, ರೇವಮ್ಮ ಸೇರಿ ಇನ್ನಿತರರು ಭಾಗವಹಿಸಿದ್ದರು.