
ಕೆ.ಆರ್.ಪುರ,ಮೇ.೪- ಎಲ್ಲರಿಗೂ ಸ್ವಂತ ಸೂರು ಕಲ್ಪಿಸಲು ನಾವು ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ಮಹದೇವಪುರ ಕ್ಷೇತ್ರದಲ್ಲಿ ೨,೭೫೦ ಮನೆಗಳನ್ನು ವಿತರಿಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಲಾಗಿದೆ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಆದೂರು,ರಾಂಪುರ,ಬಿಳೆಶಿವಾಲೆಯ,ಬಂಡೆಬೊಮ್ಮಸಂದ್ರ, ಬಿದರಹಳ್ಳಿ,ಕರುಡುಸೊಣ್ಣೇನಹಳ್ಳಿ,ಬೆಳತೂರು ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದರು.
ಪ್ರತಿಯೊಬ್ಬ ಬಡವರಿಗೂ ಸೂರು ಒದಗಿಸುವುದು ನನ್ನ ಗುರಿಯಾಗಿದೆ,ಕಳೆದ ಐದು ವರ್ಷಗಳಲ್ಲಿ ಶಾಸಕ ಹಾಗೂ ನನ್ನ ಪತಿ ಅರವಿಂದ ಲಿಂಬಾವಳಿ ಅವರು ೨,೭೫೦ ಮನೆಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಸೂರು ನೀಡುವ ಕಾರ್ಯ ಬರದಿಂದ ಸಾಗಲಿದೆ ಎಂದು ಭರವಸೆ ನೀಡಿದರು.
ಕಾವೇರಿನಗರದಲ್ಲಿ ೯೨೮, ಬಿದರಹಳ್ಳಿಯಲ್ಲಿ ೮೮೨, ವೈಟ್ ಫೀಲ್ಡ್‌ನಲ್ಲಿ ೭೩೭, ವರ್ತೂರಿ ನಲ್ಲಿ ೧೩೮, ಪಣತ್ತೂರಿನಲ್ಲಿ ೬೫ ನಿವಾಸಿಗಳಿಗೆ ಸೂರು ನೀಡಲಾಗಿದೆ ಎಂದು ನುಡಿದರು.
ಗ್ರಾಮ ಪಂಚಾಯತಿಗಳ ಸರ್ವತೋಮುಖ ಬೆಳವಣಿಗೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಪಡಿಸಲು ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.
ಮಹದೇವಪುರ ಕ್ಷೇತ್ರದ ಏಲ್ಲ ಪಂಚಾಯತಿಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಬಿದರಹಳ್ಳಿ ಪಂಚಾಯತಿ ಅಧ್ಯಕ್ಷ ಬಿ.ಜಿ.ರಾಜೇಶ್, ಭೂನ್ಯಾಯಮಂಡಳಿ ಸದಸ್ಯ ಮಧುಕುಮಾರ್, ಮಾಜಿ ಜಿಪಂ ಸದಸ್ಯ ಗಣೇಶ್, ಮುಖಂಡರಾದ ಆದೂರು ಮುನಿರಾಜು, ಸಂಪಂಗಿ,ಧನಂಜಯ, ಇದ್ದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಬಿದರಹಳ್ಳಿ,ಆದೂರು,ರಾಂಪುರ ಸೇರಿದಂತೆ ವಿವಿಧೆಡೆ ಪ್ರಚಾರ ಮಾಡಿದರು.