ಮಂಜುನಾಥಸ್ವಾಮಿ ಬ್ರಹ್ರಥೋತ್ಸವಕ್ಕೆ ಚಾಲನೆ

ಹೊಸಕೋಟೆ, ಮಾ.೧೦-ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದ್ದು ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದ ಗುರುಡಾಚಾರ್ ಪಾಳ್ಯದಲ್ಲಿರುವ ಮಂಜುನಾಥ ಸೇವಾ ಸಮಿತಿ ವತಿಯಿಂದ ೨೮ನೇ ವರ್ಷದ ಮಹಾಶಿವರಾತ್ರಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವರಾತ್ರಿ ದಿನ ಶಿವನನ್ನು ಆರಾಧಿಸುವ ಮೂಲಕ ಇಡೀ ದಿನ ಉಪವಾಸ, ಜಾಗರಣೆ ಮಾಡಿ ಶಿವಪೂಜೆಯನ್ನು ಮಾಡುವ ಮೂಲಕ ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುವುದು ವಾಡಿಕೆ. ಅದರಂತೆ ೨ ದಶಕಗಳಿಂದ ಇದ್ದ ಮಂಜುನಾಥ ಸ್ವಾಮಿ ದೇವಾಲಯವನ್ನು ಪುನರ್ ಪ್ರತಿಷ್ಠಾಪನೆ ಮಾಡುವ ಮೂಲಕ ಪ್ರಥಮ ವರ್ಷದ ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಎಂದರು.
ಬರಗಾಲ ದೂರವಾಗಲಿ: ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ನೀರಿಲ್ಲದೆ ರೈತರು ಬೆಳೆ ಬೆಳೆಯಲು ಪರದಾಡುವಂತ ಸನ್ನಿವೇಶ ಎದುರಾಗಿದೆ. ಅಲ್ಲದೆ ಬೆಂಗಳೂರು ನಗರದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕುಡಿಯುವ ನೀರಿಗೂ ಸಹ ಸಮಸ್ಯೆ ಉಲ್ಬಣ ಆಗಿದ್ದು ವರುಣ ತ್ವರಿತವಾಗಿ ಕೃಪೆ ತೋರುವ ಮೂಲಕ ನೀರಿನ ಸಮಸ್ಯೆ ದೂರವಾಗಿ ನಾಡು ಸಮೃದ್ದವಾಗಿರಲಿ ಎಂದು ಶಿವರಾತ್ರಿ ದಿನವಾದ ಇಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಬ್ರಹ್ಮರಥೋತ್ಸವದ ವೇಳೆ ವೀರಗಾಸೆ, ಡೊಳ್ಳುಕುಣಿತ, ನಾದಸ್ವರ, ಗೊಂಬೆ ಕುಣಿತ, ಚಂಡೆವಾದ್ಯ, ತಮಟೆ ವಾದ್ಯ, ಕೀಲುಕುದುರೆ, ಮರಗಾಲು ಕುಣಿತ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು.
ನಗರಸಭೆ ಮಾಜಿ ಸದಸ್ಯ ಅನಂತರಮಯ್ಯ, ಪುರಸಭೆ ಮಾಜಿ ಅಧ್ಯಕ್ಷ ಪಿಳ್ಳಣ್ಣ, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್, ತಾ.ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಮುಖಂಡರಾದ ರೇವಣ್ಣ, ಶಾಂತಮ್ಮ ಸೇರಿದಂತೆ ಹಲವಾರಯ ಗಣ್ಯರು ಹಾಜರಿದ್ದರು.