ಮಂಜಮ್ಮ ಜೋಗತಿ ರಾಜ್ಯದ ಸಾರ್ವತ್ರಿಕ ಚುನಾವಣೆಯ ರಾಯಭಾರಿ


ಸಂಜೆವಾಣಿ ವಾರ್ತೆ
ಮರಿಯಮ್ಮನಹಳ್ಳಿ, ಮಾ.15: ತಮ್ಮ ಜೋಗತಿ ನೃತ್ಯದ ಮೂಲಕ ರಾಷ್ಟ್ರಮಟ್ಟದಲ್ಲಿ ಛಾಪುಮೂಡಿಸಿ, ದೇಶದ ಉನ್ನತ ಪ್ರಶಸ್ತಿ ಪದ್ಮಶ್ರೀಗೆ ಭಾಜನರಾದ ಮಂಜಮ್ಮ ಜೋಗತಿ ಈ ಬಾರಿ ರಾಜ್ಯದ ಸಾರ್ವತ್ರಿಕ ಚುನಾವಣೆಯ ರಾಯಭಾರಿಯಾಗಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಕಾವು ಜೋರಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತೆರೆಮರೆಯಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಜಾಗೃತಿಗಾಗಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಚುನಾವಣಾ ರಾಯಭಾರಿಗಳ ನೇಮಕ ಮಾಡಲಾಗಿದೆ.
ಮಂಜಮ್ಮ ಜೋಗತಿರವರು ಚುನಾವಣಾ ರಾಯಭಾರಿಯಾಗಿರುವುದು ವಿಶೇಷ. ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ ಸೇರಿ ಹತ್ತು ಜಿಲ್ಲೆಗಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಚುನಾವಣಾ ರಾಯಭಾರಿಗಳಾಗಿ ಮಾಡಿ ರಾಜ್ಯಚ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ, ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಅನೂಪ್ ಚಂದ್ರಪಾಂಡೆ, ಅರುಣ್ ಗೊಯಲ್, ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಂಜಮ್ಮ ಜೋಗತಿರವರನ್ನು ರಾಜ್ಯದ ಸಾರ್ವತ್ರಿಕ ಚುನಾವಣೆಗೆ ನೇಮಿಸಿ, ಗೌರವಿಸಲಾಗಿದೆ.
ಮಂಜಮ್ಮ ಜೋಗತಿರವರು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿ, ಸದಸ್ಯರಾಗಿ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಕಲೆಯನ್ನು ಗುರುತಿಸಿ ದೇಶದ ಉನ್ನತ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿದೆ. ಈಗ ಚುನಾವಣಾ ರಾಯಭಾರಿಯಾಗಿ ಚುನಾವಣಾ ಆಯೋಗಕ್ಕೆ ಸಲಹೆ ನೀಡಬಹುದು, ಮತದಾನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.