ಮಂಗಳೂರು ಸ್ಪೋಟ; ತೀರ್ಥಹಳ್ಳಿಯಲ್ಲಿ ಪೊಲೀಸ್ ದಾಳಿ

ಶಿವಮೊಗ್ಗ, ನ. ೨೧: ಮಂಗಳೂರಿನಲ್ಲಿ ಆಟೋವೊಂದರಲ್ಲಿ ನಡೆದ ಸ್ಪೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಮುಂಜಾನೆ ತೀರ್ಥಹಳ್ಳಿ ಪಟ್ಟಣದ ಹಲವೆಡೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪಿ ತಾರೀಖ್ ಈ ಹಿಂದೆ ತುಂಗಾ ನದಿ ತೀರದಲ್ಲಿ ನಡೆದ ಸ್ಪೋಟದಲ್ಲೂ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೀರ್ಥಹಳ್ಳಿ ಪಟ್ಟಣದ ಸುಮಾರು ಐದು ಮನೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಪೊಲೀಸರು ಈ ತಪಾಸಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಶಿವಮೊಗ್ಗ ಪೊಲೀಸರು ಬಂಧಿಸಿದ್ದ ಶಂಕಿತ ಉಗ್ರ ಹಾಗೂ ತಲೆಮರೆಸಿಕೊಂಡಿರುವ ಶಂಕಿತನ ಮನೆ, ಸಂಬಂಧಿಗಳ ಮನೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಹೇಳಲಾಗಿದೆ. ಮತ್ತೊಂದೆಡೆ, ಈ ಕುರಿತಂತೆ ಪೊಲೀಸ್ ಇಲಾಖೆಯಿಂದ ಇನ್ನಷ್ಟೆ ಅಧಿಕೃತ ವಿವರಗಳು ಲಭ್ಯವಾಗಬೇಕಾಗಿದೆ.