ಮಂಗಳೂರು ವೃತ್ತದ ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ ಕುರಿತ ವಾಸ್ತವಿಕ ವರದಿ ನೀಡಲು ಸಚಿವ ಅರವಿಂದ ಲಿಂಬಾವಳಿ ಸೂಚನೆ

ಮಂಗಳೂರು, ಎ.೨೪- ಮಂಗಳೂರು ವೃತ್ತದ ವ್ಯಾಪ್ತಿಗೆ ಬರುವ ಡೀಮ್ಡ್ ಫಾರೆಸ್ಟ್ ಕುರಿತ ಹಾಗೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವಾಸ್ತವಿಕ ವರದಿ ನೀಡಿದಾಗ ಮಾತ್ರ ಸರಿಯಾದ ಕ್ರಮ ವಹಿಸಲು ಸಾಧ್ಯವಾಗುತ್ತದೆ ಆದ್ದರಿಂದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು  ಮಂಗಳೂರಿಗೆ ಭೇಟಿ ನೀಡಿ ಮಂಗಳೂರು ವೃತ್ತದ ಅರಣ್ಯ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೃದ್ಧ ಅರಣ್ಯ ಪ್ರದೇಶ ಹೊಂದಿದ್ದು ಇಲ್ಲಿ ಅರಣ್ಯ ಅಭಿವೃದ್ಧಿಗೆ ಹೇರಳ ಅವಕಾಶವಿದೆ ಎಂದರು. ಮೂರು ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿಕೊಂಡ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಹೇಳಿದರು.

ಮಾನವ ವನ್ಯಜೀವಿ ಸಂಘರ್ಷದ ಪರಿಹಾರ ನೀಡುವ ಕ್ರಮ ನಿಧಾನಗತಿಯಲ್ಲಿದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಪರಿಹಾರನ್ನು ಶೀಘ್ರವಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯ ಪ್ರದೇಶದಲ್ಲಿ ಇರುವ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಬಗ್ಗೆ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಸಚಿವ ಅರವಿಂದ ಲಿಂಬಾವಳಿ, ಅಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಬೇಕಾದ ಹಣಕಾಸಿನ ಬಗ್ಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಗೇರು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಚಟುವಟಿಕೆಗಳ  ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಸಭೆಯಲ್ಲಿ ಮಂಗಳೂರು ವೃತ್ತ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಾಲನ್, ಮಂಗಳೂರು ರೇಂಜ್ ಫಾರೆಸ್ಟ್ ಆಫೀಸರ್ ಪಿ. ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸುಬ್ರಹ್ಮಣ್ಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.