ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಕನ್ನಡ ವಿಜ್ಞಾನ ಸ್ಪರ್ಧೆ

ಮಂಗಳೂರು, ಜ.೭- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸಿರುವ ರಾಜ್ಯ ಮಟ್ಟದ ಕನ್ನಡದಲ್ಲಿ ವಿಜ್ಞಾನ ಸ್ಪರ್ಧೆಯ ಆಯ್ಕೆ ಸುತ್ತಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಫರ್ಧೆಯು ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.೫ ರಂದು ನಡೆಯಿತು.
ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ, ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಡಾ.ಅಪ್ಪಾಜಿಗೌಡ ಎಸ್.ಬಿ ಅವರು ಸ್ಫರ್ಧೆಗಳನ್ನು ಉದ್ಘಾಟಸಿ ಮಾತನಾಡಿ, ವಿಜ್ಞಾನವನ್ನು ನಮ್ಮ ಆಡುಭಾಷೆ ಕನ್ನಡದಲ್ಲಿ ಸರಳವಾಗಿ, ಮನಮುಟ್ಟುವಂತೆ ಅರ್ಥೈಸಿಕೊಳ್ಳಬಹುದು. ವಿಜ್ಞಾನದ ಅರ್ಥೈಸುವಿಕೆ ಮಾತೃಭಾಷೆಯಲ್ಲಿ ಸುಲಭವಾಗಿ ಮಾಡಬಹುದು. ವಿಜ್ಞಾನದ ನೂತನ ಶಿಕ್ಷಣ ನೀತಿಯಲ್ಲಿ ಸರ್ಕಾರ ಅವಕಾಶವನ್ನು ಕೂಡ ಕಲ್ಪಿಸಿದೆ. ಕನ್ನಡದಲ್ಲಿರುವ ವಿಜ್ಞಾನ ಬರಹಗಳನ್ನು ಓದುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಉಪನ್ಯಾಸ ಸ್ಫರ್ಧೆಗಳು ಮುಗಿದ ಬಳಿಕ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಯಲ್ಲಿ ವಿಶೇಷಾಧಿಕಾರಿಯಾಗಿರುವ ಡಾ.ಜಯಕರ ಭಂಡಾರಿಯವರು ಬಹುಮಾನಗಳನ್ನು ವಿತರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ಸುಮಾರು ೩೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್. ಸಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಟೀಫನ್ ಕ್ವಾಡ್ರಸ್ ಹಾಗೂ ಡಾ.ಶಿವರಾಮ್ ಪಿ. ಅವರು ಉಪಸ್ಥಿತರಿದ್ದರು. ಸ್ಫರ್ಧೆಗಳ ಸಂಯೋಜಕಿ ಡಾ. ಕೃಷ್ಣಪ್ರಭಾ ಸ್ವಾಗತಿಸಿ, ಡಾ.ಸುಧಾಕರನ್ ವಂದಿಸಿದರು.