ಮಂಗಳೂರು ವಿಮಾನ ಸೇವೆ ಪ್ರಾರಂಭಕ್ಕೆ ದ.ಕ. ಸಂಘ ಮನವಿ

ಮಂಗಳೂರು, ಜ.೧೨- ಕಲಬುರಗಿಯಿಂದ ಮಂಗಳೂರಿಗೆ ಶ್ರೀಘ್ರದಲ್ಲೇ ವಿಮಾನಯಾನ ಪ್ರಾರಂಭಿಸುವಂತೆ ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಸದಾನಂದ ಪೆರ್ಲ ನೇತೃತ್ವದ ನಿಯೋಗವು ಲೋಕಸಭಾ ಸದಸ್ಯರಾದ ಡಾ. ಉಮೇಶ ಜಾಧವ್ ಮತ್ತು ಸ್ಟಾರ್ ಏರ್ ಮಾರುಕಟ್ಟೆ ಮತ್ತು  ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ  ರಾಜ್  ಹೇಸಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಜ.೧೧ ರಂದು (ಸೋಮವಾರ) ಕಲಬುರಗಿ-ತಿರುಪತಿ ವಿಮಾನ ಸೇವೆ ಪ್ರಾರಂಭದ ವೇಳೆ ವಿಮಾನನಿಲ್ದಾಣದಲ್ಲಿ ಮನವಿ ಸಲ್ಲಿಸಿ ಕರಾವಳಿಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಮತ್ತು ಲಾತೂರ್, ಜಹೀರಾಬಾದ್ ಅಕ್ಕಲಕೋಟೆ ಮುಂತಾದೆಡೆಗಳಿಂದ  ಸಾವಿರಾರು ಸಂಖ್ಯೆಯ ಜನರು ಶಿಕ್ಷಣ, ಆರೋಗ್ಯ ಪ್ರವಾಸೋದ್ಯಮ, ವಾಣಿಜ್ಯ ವಹಿವಾಟಿಗಾಗಿ  ಕರಾವಳಿಗೆ ತೆರಳುತ್ತಿದ್ದಾರೆ. ಸುಮಾರು ೧೦ ರಷ್ಟು ಖಾಸಗಿ ಬಸ್‌ಗಳಲ್ಲಿ ಮತ್ತು ಸೋಲಾಪೂರ-ಹಾಸನ ರೈಲುಗಾಡಿಯಲ್ಲಿ ಇದೀಗ ಸಂಚರಿಸುತ್ತಿದ್ದಾg. ಈ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಸೇವೆ ತುರ್ತು ಅಗತ್ಯ ಎಂದು ನಿಯೋಗವು ಮನವರಿಕೆ ಮಾಡಿತು. ತುರ್ತು ಅಗತ್ಯಕ್ಕಾಗಿ ಇದೀಗ  ಹೈದರಾಬಾದ್‌ಗೆ ತೆರಳಿ ವಿಮಾನದ ಮೂಲಕ ಮಂಗಳೂರು ಸಂಚಾರ ಮಾಡುತ್ತಿದ್ದು ತ್ರಾಸದಾಯಕವಾಗಿದೆ . ಹೈದರಾಬಾದ್- ಕಲಬುರಗಿ-ಮಂಗಳೂರು, ಕಲಬುರಗಿ-ಬೆಂಗಳೂರು-ಮಂಗಳೂರು, ಕಲಬುರಗಿ-ಹುಬ್ಬಳ್ಳಿ-ಮಂಗಳೂರು ಮತ್ತು ಕಲಬುರಗಿ-ಮುಂಬಯಿ-ಮಂಗಳೂರು ಈ ನಾಲ್ಕು ರೂಟ್‌ಗಳ ಪ್ರಸ್ತಾಪ ನೀಡಿದ್ದು ಹೆಚ್ಚು ಲಾಭದಾಯಕ ಮಾರ್ಗ ಎಂದು ತಿಳಿಸಲಾಯಿತು.

ಮನವಿ ಸ್ವೀಕರಿಸಿದ ಲೋಕಸಭಾ ಸದಸ್ಯರು ಕೂಡಲೇ ದೆಹಲಿಯಲ್ಲಿ ಅಧಿಕೃತ ಅಧಿಕಾರಿಗಳ ಜೊತೆ ಚರ್ಚಿಸಿ  ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ  ಇಳಿಯಲು ಅವಕಾಶ ಮಾಡಿಕೊಟ್ಟರೆ ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಟಾರ್ ಏರ್‌ನ ಪ್ರದಾನ ವ್ಯವಸ್ಥಾಪಕ ರಾಜ್ ಹೆಸ್ಸಿ ಮಾತನಾಡಿ ಕೂಡಲೇ ಈ ಹೊಸ ಮಾರ್ಗದ ಬಗ್ಗೆ ಅಧ್ಯಯನ ತಂಡ ಕಳುಹಿಸಲಾಗುವುದು. ಪ್ರಯಾಣಿಕರ ಅಂಕಿ ಅಂಶ ಸಂಗ್ರಹಿಸಲಾಗುವುದಲ್ಲದೆ ಈ ಮಾರ್ಗದ ಬಗ್ಗೆ ಪ್ರಸ್ತಾವನೆ ಈಗಾಗಲೇ ಬಂದಿದೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ, ಕರ್ನಾಟಕ ರಾಜ್ಯ ಹೋಟೆಲ್ ಮತ್ತು ರೆಸ್ಟಾರೆಂಟ್ ಮಾಲಿಕರ ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಸತ್ಯನಾಥ ಶೆಟ್ಟಿ, ಕಲಬುರಗಿ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಂಡನ್, ರಾಜ್ಯ ಪದಾಧಿಕಾರಿ ಸಮಿತಿ ಸದಸ್ಯ ಪ್ರವೀಣ್ ಜತ್ತನ್ ಹೈದರಾಬಾದ್  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅಮರನಾಥ ಪಾಟೀಲ್ ಇದ್ದರು.