ಮಂಗಳೂರು ವಿಮಾನ ನಿಲ್ದಾಣಕ್ಕೆ “ಕೋಟಿ – ಚೆನ್ನಯ ” ಹೆಸರಿಡಲು ಈಡಿಗರ ಒತ್ತಾಯ

ಕಲಬುರಗಿ:ಡಿ.19: ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಸರಕಾರವು ಮಹಾತ್ಮರ ಹೆಸರಿಟ್ಟರೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾತ್ರ ” ಕೋಟಿ – ಚೆನ್ನಯ “ಹೆಸರಿಡಲು ಹಿಂದೇಟು ಹಾಕಿರುವುದು ಕರ್ನಾಟಕದ ಈಡಿಗ, ಬಿಲ್ಲವ ಜನಾಂಗದವರಿಗೆ ಮಾಡಿದ ದ್ರೋಹವೆಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸಿದೆ.
ವಿಧಾನಸಭಾ ಅಧಿವೇಶನದಲ್ಲಿ ವಿಜಯಪುರ, ಶಿವಮೊಗ್ಗ ,ಬೆಳಗಾವಿ ಸೇರಿದಂತೆ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೊಸದಾಗಿ ಹೆಸರಿಡಲು ಪ್ರಸ್ತಾಪ ಮಂಡಿಸಿದರೂ ಮಂಗಳೂರು ವಿಮಾನ ನಿಲ್ದಾಣಕ್ಕೆ “ಕೋಟಿ – ಚೆನ್ನಯ” ಹೆಸರಿಡಲು 10 ವರ್ಷಗಳಿಂದ ಬಿಲ್ಲವರು ಸೇರಿದಂತೆ ಸರ್ವ ಪಕ್ಷೀಯರು ಹೋರಾಟ ಮಾಡಿದರೂ ಸರಕಾರವು ಮಾತ್ರ ಬೇಡಿಕೆಯನ್ನು ಕಡೆಗಣಿಸಿದೆ. ಇದು ಬಿಲ್ಲವರ ಅವಗಣನೆಯಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ವೆಂಕಟೇಶ ಕಡೇಚೂರ್ ತೀವ್ರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಕಾರವು ವಿಷಯ ಪ್ರಸ್ತಾಪಿಸಿ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೆಸರು ಘೋಷಣೆ ಮಾಡಿದಾಗಲೂ ಮುಖ್ಯಮಂತ್ರಿಗಳು ಮಂಗಳೂರು ವಿಮಾನ ನಿಲ್ದಾಣದ ಹೆಸರಿಡುವ ಪ್ರಸ್ತಾಪದ ಬಗ್ಗೆ ಮೌನ ವಹಿಸಿರುವುದು ಈಡಿಗ ಬಿಲ್ಲವ ಜನಾಂಗವನ್ನು ನಿರ್ಲಕ್ಷಿಸಿದ್ದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡುವಂತೆ 10 ವರ್ಷಗಳಿಂದ ಸತತವಾಗಿ ಬಿಲ್ಲವರು ಸೇರಿದಂತೆ ಸರ್ವ ಜನಾಂಗದವರು ಹೋರಾಟ ಮಾಡುತ್ತಿದ್ದು ಈಗಾಗಲೇ ಬಜಪೆ ಗ್ರಾಮ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ ಹೆಸರಿಡುವಂತೆ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ವಿಧಾನಸಭೆಯ ಸ್ಪೀಕರ್ ಯು. ಟಿ ಖಾದರ್ ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲು ಕೂಡ ಈಗಾಗಲೇ ಹೆಸರು ಇಡಲು ಒಪ್ಪಿಗೆ ಸೂಚಿಸಿ ಕರಾವಳಿ ಬಿಲ್ಲವರ ಹಾಗೂ ಇತರರು ನಡೆಸಿದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದಾಗಿದೆ.

ಧ್ವನಿ ಎತ್ತಿದ ಕೋಟ:ಬೆಳಗಾವಿಯ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ನಾಲ್ಕು ವಿಮಾನ ನಿಲ್ದಾಣಗಳಿಗೆ ಹೊಸ ಹೆಸರು ಶಿಫಾರಸು ಮಾಡಿದ ವೇಳೆ ವಿಧಾನ ಪರಿಷತ್ತಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತ್ರ ಮಂಗಳೂರಿಗೆ “ಕೋಟಿ – ಚೆನ್ನಯ ” ಹೆಸರಿಡುವಂತೆ ಒತ್ತಾಯಿಸಿದರೇ ಹೊರತು ಕರಾವಳಿಯ ಇತರ ಯಾವೊಬ್ಬ ಶಾಸಕನೂ ತುಟಿಪಿಟಿಕ್ಕೆನ್ನಲಿಲ್ಲ. ಇದು ಬಿಲ್ಲವ ಜನಾಂಗದವರ ಕಡಗಣನೆಯಾಗಿದ್ದು ಕರಾವಳಿ ಮಲೆನಾಡು ಶಾಸಕರ ಈ ರೀತಿಯ ನಿರಾಸಕ್ತಿ ಖಂಡನೀಯ ಎಂದಿದ್ದಾರೆ.ಈಡಿಗರ 26 ಪಂಗಡಗಳನ್ನು ಪ್ರತಿನಿಧಿಸುವ ಸಚಿವರು ಶಾಸಕರು ಈ ಬಗ್ಗೆ ಸ್ಪಂದಿಸದಿರುವುದು ಸಮಾಜಕ್ಕೆ ಮಾಡಿದ ಅನ್ಯಾಯ. ಈಡಿಗ, ಬಿಲ್ಲವರ ಬೇಡಿಕೆಗಳಿಗೆ ಸರಕಾರವೂ ಕವಡೆ ಕಿಮ್ಮತ್ತು ನೀಡದಿರುವುದಕ್ಕೆ ಟೀಕಿಸಿದ್ದಾರೆ.