ಮಂಗಳೂರು ಮೂಲದ ದಂಪತಿಯ ಇರಿದು ಹತ್ಯೆ

ಆಕ್ಲೆಂಡ್‌ನಲ್ಲಿ ನಡೆದ ಘಟನೆ: ಮಗ ಗಂಭೀರ
ಮಂಗಳೂರು, ಮಾ.೩೧- ಮಂಗಳೂರು ಮೂಲದ ದಂಪತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದಿದೆ. ಇರಿತಕ್ಕೊಳಗಾದ ದಂಪತಿಯ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ಮಂಗಳೂರು ನಗರದ ಬಲ್ಮಠ ನಿವಾಸಿ ಎಲಿಜಬೆತ್ ಬಂಗೇರ ಹಾಗೂ ಅವರ ಪತಿ ಹರ್ಮನ್ ಬಂಗೇರ ಘಟನೆಯಲ್ಲಿ ಮೃತಪಟ್ಟ ದಂಪತಿ. ಎಂಜಿನಿಯರಿಂಗ್ ಪದವೀಧರನಾದ ಅವರ ಪುತ್ರ ಶೀಲ್ ಕೂಡಾ ಇರಿತಕ್ಕೊಳಗಾಗಿದ್ದು, ಗಂಭೀರ ಗಾಯಗೊಂಡ ಆತ ಆಸ್ಪತ್ರೆಯಲ್ಲಿದ್ದಾನೆ. ಈ ಹತ್ಯೆ ಸಂದರ್ಭ ಮಧ್ಯಪ್ರವೇಶಿಸಲು ಯತ್ನಿಸಿದ ದಾರಿಹೋಕನೆಂದು ನಂಬಲಾದ ನಾಲ್ಕನೇ ವ್ಯಕ್ತಿಯೂ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಲಿಜಬೆತ್ ಅವರ ತಂದೆ ಎಡ್ವರ್ಡ್ ಅಮ್ಮಣ್ಣ, ಬಲ್ಮಠದ ಶಾಂತಿ ಕ್ಯಾಥೆಡ್ರಲ್‌ನಲ್ಲಿರುವ ಭಾನುವಾರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೆರ್ಕರ ಹಿಲ್ ಚರ್ಚ್‌ನಲ್ಲಿ ಇವರು ಹಿರಿಯರಾಗಿದ್ದರು. ಹರ್ಮನ್ ಮುಂಬೈನ ಶಾಲೆಯೊಂದರ ನಿರ್ವಾಹಕರಾಗಿದ್ದರು. ಎಲಿಜಬೆತ್ ಅವರು ಮುಂಬೈನ ಗೋದ್ರೆಡ್ಜ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಮುಂಬೈನಲ್ಲೇ ಇದ್ದ ಹರ್ಮನ್‌ನನ್ನು ಮದುವೆಯಾಗಿದ್ದರು. ನಂತರ ದಂಪತಿ ಗೋವಾದಲ್ಲಿ ನೆಲೆಸಿದರು. ತಮ್ಮ ಪುತ್ರನ ಉನ್ನತ ಶಿಕ್ಷಣಕ್ಕಾಗಿ ಈ ದಂಪತಿಗಳು ೨೦೦೭ ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದರು.