ಮಂಗಳೂರು ಭಾಗಕ್ಕೆ ಎನ್ಐಎ ಅವಶ್ಯಕತೆ ಇದೆ: ಬೊಮ್ಮಾಯಿ

ಮಂಗಳೂರು, ಜು.೨೯- ಕಳೆದ ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದರಿಂದ ಈ ಘಟನೆಯನ್ನು ನಡೆಸಲಾಗಿದೆ. ಇದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ದೇಶವನ್ನು ಛಿದ್ರ ಮಾಡುವ ಯೋಜನಾ ಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ರಾಜ್ಯದ ಗಡಿ ದಾಟಿರಬಹುದು. ಈ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ, ಕೆಲವರನ್ನು ವಶಕ್ಕೆ ತೆಗೆದುಕೊಂಡು, ಅವರಿಂದ ಪಡೆದ ಮಾಹಿತಿಯಿಂದ ತನಿಖೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ನಿನ್ನೆ ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕೊಲೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ ೨೫ ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದ ಅವರು ಕೊಲೆ ಪ್ರಕರಣವನ್ನು ಬೇಧಿಸುವವರೆಗೆ ಅಕ್ಷರಶ: ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಪ್ರವೀಣ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಚಿಕ್ಕ ಅಂಗಡಿಯೇ ಆದಾಯದ ಮೂಲವಾಗಿತ್ತು. ಸರ್ಕಾರದ ವತಿಯಿಂದ ಪರಿಹಾರ ನಿಧಿಯಿಂದ ೨೫ ಲಕ್ಷ ರೂ. ಪರಿಹಾರ ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ ೨೫ ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲಾಗಿದೆ. ಪ್ರವೀಣ್ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಅವರ ಜೀವನದ ಮುಂದಿನ ಭವಿಷ್ಯಕ್ಕೆ ಸಹಕಾರ ನೀಡಲಾಗುವುದು. ಪ್ರವೀಣ್ ಆತ್ಮಕ್ಕೆ ಕೊಲೆಗೈದವರಿಗೆ ಶಿಕ್ಷೆಯಾದಾಗ ಮಾತ್ರ ಶಾಂತಿ ದೊರಕಲಿದೆ. ಪ್ರವೀಣ್ ಕುಟುಂಬದವರು ಇದೇ ಮಾತನ್ನು ಹೇಳಿದ್ದಾರೆ. ಇನ್ನೆಂದೂ ಈ ರೀತಿ ಯಾರಿಗೂ ಆಗಬಾರದು, ಇದರ ಹಿಂದಿರುವ ಸಂಘಟನೆಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.  ಕಟುಕರಿಗೆ ಶಿಕ್ಷೆ ಆಗುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು. ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೊನ್ನೆ ನಡೆದ ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ. ಅತಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸವಿದೆ. ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ  ದುಷ್ಕೃತ್ಯಗಳಲ್ಲಿ ತೊಡಗಿಕೊಂಡಿರುವ ಸಮಾಜಘಾತುಕ ಶಕ್ತಿಗಳ ಜಾಡು ಹಿಡಿದು, ಈ ದಿಸೆಯಲ್ಲಿಯೂ ತನಿಖೆ ಕೈಗೊಂಡು ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ ಎಂದರು. ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ತನಿಖಾ ದಳವನ್ನು ಒದಗಿಸಲು ಕೋರಲಾಗಿದೆ. ವಿಶೇಷವಾಗಿ ಮಂಗಳೂರು ಭಾಗಕ್ಕೆ ಎನ್ ಐಎಯ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಪ್ರಾಥಮಿಕ ತನಿಖಾ ವರದಿಯ ಆಧಾರವಾಗಿ ಹೆಚ್ಚುವರಿ ತನಿಖೆಯ ಅವಶ್ಯಕತೆ ಇದ್ದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗುವುದು. ಈ ಘಟನೆಗೆ ಬೆಂಬಲ ನೀಡಿರುವ ಬಗ್ಗೆಯೂ ತನಿಖೆ ನಡೆಸಿ, ಈ ಕುಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಜಾಲವನ್ನು ಬೇಧಿಸಲಾಗುವುದು. ಪಿಎಫ್‍ಐ ಬ್ಯಾನ್ ಮಾಡಲು ಕ್ರಮಗಳು ಪ್ರಾರಂಭವಾಗಿದೆ. ಈ ರೀತಿಯ ದುಷ್ಕೃತ್ಯಗಳು ಭಾರತದ ವಿವಿಧ ರಾಜ್ಯಗಳಲ್ಲಿ ನಡೆದಿದ್ದು, ದೇಶದ ಮಟ್ಟದಲ್ಲಿ ಸರಿಯಾದ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಮಸೂದ್ ಹತ್ಯೆಗೂ ಹಾಗೂ ಪ್ರವೀಣ್ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳ ಕರ್ತವ್ಯ ವೈಫಲ್ಯವಾಗಿದ್ದರೆ ಅದನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಪ್ರವೀಣ್‌ ಹತ್ಯೆ ಪ್ರಕರಣ; ಆರೋಪಿಗಳಿಗೆ ನ್ಯಾ.ಬಂಧನ
ಪುತ್ತೂರು, ಜು.೨೯- ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾದ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಿಬ್ಬರನ್ನು ಗುರುವಾರ ಸಂಜೆ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆ.11ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಝಾಕಿರ್ ಮತ್ತು ಶಫೀಕ್ ಎಂಬ ಇಬ್ಬರು ಆರೋಪಗಳನ್ನು ಸಂಜೆ ಸುಮಾರು 6 ಗಂಟೆಯ ವೇಳೆಗೆ ಬೆಳ್ಳಾರೆ ಠಾಣೆಯ ಪೊಲೀಸರು ಪುತ್ತೂರಿನ ಪ್ರಧಾನ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶ ಗೌಡ ಆರ್.ಪಿ ಅವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಕೊಲೆ ಪ್ರಕರಣದ ತನಿಖೆಗೆ ಅಗತ್ಯವಿದ್ದಲ್ಲಿ ಪೊಲೀಸರು ಮತ್ತೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ಕವಿತಾ ಅವರು ತಿಳಿಸಿದ್ದಾರೆ.