ಮಂಗಳೂರು, ಬೆಂಗಳೂರು ಸ್ಫೋಟಕ್ಕೂ ಸಾಮ್ಯತೆ ಇಲ್ಲ:ಸಿಎಂ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೨:ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಿನ್ನೆ ನಡೆದ ಬಾಂಬ್‌ಸ್ಫೋಟಕ್ಕೂ ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಯಾವುದೇ ಸಾಮ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆಮಾತನಾಡಿದ ಅವರು,ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ನಿನ್ನೆಯ ಬೆಂಗಳೂರಿನ ಬಾಂಬ್‌ಬ್ಲಾಸ್ಟ್‌ಗೂ ಸಾಮ್ಯತೆ ಇಲ್ಲ. ಮಂಗಳೂರಿನಲ್ಲಿ ಕುಕ್ಕರ್‌ನಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು, ಬೆಂಗಳೂರಿನಲ್ಲಿ ಯಾವ ಕುಕ್ಕರ್‌ನಲ್ಲೂ ಸ್ಫೋಟ ಆಗಿಲ್ಲ ಎಂದರು.
ನಿನ್ನೆಯ ಬೆಂಗಳೂರಿನಬಾಂಬ್ ಸ್ಫೋಟ ಭಯೋತ್ಪಾದಕಕೃತ್ಯವಾ ಇಲ್ಲವಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಒಬ್ಬ ವ್ಯಕ್ತಿ ನಡೆಸಿರುವುದಾ ಅಥವಾ ಸಂಘಟನೆಯಿಂದ ಆಗಿರುವ ಕೃತ್ಯನಾ ಎಂಬುದೂ ಇನ್ನೂಗೊತ್ತಾಗಿಲ್ಲ.ತನಿಖೆ ನಂತರ ಎಲ್ಲವೂ ಬಯಲಾಗಿದೆ ಎಂದರು.
ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ವ್ಯಕ್ತಿ ಈ ಸ್ಫೋಟ ನಡೆಸಿದ್ದಾನೆ. ಹೋಟೆಲ್‌ನಲ್ಲಿ ತಿಂಡಿಯ ಟೋಕನ್ ಪಡೆದು ಹೋಟೆಲ್‌ನಲ್ಲೇ ಕುಳಿತು ಇಡ್ಲಿ ತಿಂದು ಟೈಮರ್ ಫಿಕ್ಸ್ ಮಾಡಿ ನಂತರ ಬ್ಲಾಸ್ಟ್ ಮಾಡಿದ್ದಾನೆ.
ಈ ವ್ಯಕ್ತಿ ಬಸ್ಸಿನಿಂದ ಇಳಿಯುವುದು ಹೋಟೆಲ್‌ಗೆ ಬರುವುದು ಎಲ್ಲವೂ ಸಿಸಿ ದೃಶ್ಯಾವಳಿಗಳು ಸಿಕ್ಕಿವೆ. ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬಿಜೆಪಿ ವಿರುದ್ಧ ಕಿಡಿ
ಅಲ್ಪಸಂಖ್ಯಾತರ ಓಲೈಕೆಯಿಂದ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್‌ನಂತಹ ಕೃತ್ಯ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಕಿಡಿಕಾರಿದ ಮುಖ್ಯಮಂತಿ ಸಿದ್ದರಾಮಯ್ಯ, ಬಿಜೆಪಿ ಕಾಲದಲ್ಲೂ ಬಾಂಬ್ ಬ್ಲಾಸ್ಟ್‌ಗಳು ಆಗಿತ್ತು. ಹಾಗಾದರೆ ಆ ಬ್ಲಾಸ್ಟ್‌ಗೆ ಏನು ಕಾರಣ ಎಂದು ಪ್ರಶ್ನಿಸಿ ಅದು ಅಲ್ಪಸಂಖ್ಯಾತರ ತುಷ್ಠೀಕರಣವೇ ಎಂದು ವ್ಯಂಗ್ಯವಾಡಿದರು.
ರಾಜಕೀಯ ಕಾರಣಕ್ಕೆ ಬಿಜೆಪಿ ಇಂತಹ ಹೇಳಿಕೆ ನೀಡುತ್ತಿದೆ ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಎಫ್‌ಎಸ್‌ಎಲ್ ವರದಿ ಬಂದಿಲ್ಲ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣದ ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಮೇಲೆ ಘೋಷಣೆ ಕೂಗಿರುವುದು ಸಾಬೀತಾದರೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಠಿಣಕ್ರಮ ನಿಶ್ಚಿತ ಎಂದರು.
ವರದಿಯೇ ಬಂದಿಲ್ಲ ಎಂದ ಮೇಲೆ ವರದಿಯನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಏನು ಉತ್ತರ ಕೊಡಲು ಸಾಧ್ಯ ವರದಿ ಬರಲಿ ನಂತರ ಮುಂದಿನದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.