ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತು ಕೆಲಸ ಶ್ಲಾಘನೀಯ: ಎಲಿಯಾಸ್ ಫೆರ್ನಾಂಡೀಸ್

ಮಂಗಳೂರು, ನ.೫- “ಅಂಬೇಡ್ಕರ್ ವಸತಿ ಶಾಲೆಯಲ್ಲಿ ಓದುವ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಆಸಕ್ತಿ ಹೊಂದಿದ್ದ ವಿಷಯ ದಲ್ಲಿ ಓದಿ ಜಾಣರಾಗಲು ಹಾಗೂ ಮುಂದೆ  ಆ ವಸತಿ ಶಾಲೆಗಳ ಸದುದ್ದೇಶವನ್ನು ಯಶಸ್ವಿಯಾಗಲು ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತು ಕೊಡಮಾಡುವ ಸುಮಾರು ಇಪ್ಪತ್ತು ಸಾವಿರ ರೂಪಾಯಿ ವೆಚ್ಚದ ಕಪಾಟು ಸಹಿತ ಪುಸ್ತಕ ನಿಜವಾಗಿಯೂ ಉತ್ತಮ ಕೊಡುಗೆ” ಎಂದು ಪೋರ್ ವಿಂಡ್ಸ್  ಮಾಸ್ ಕಮ್ಯುನಿಕೇಶನ್ಸ್ ಆಂಡ್ ಸರ್ವೀಸಸ್ ಇದರ ಆಡಳಿತ ನಿರ್ದೇಶಕ ಎಲಿಯಾಸ್ ಫೆರ್ನಾಂಡಿಸ್  ನುಡಿದರು.

ಅವರು ಅಂಬೇಡ್ಕರ್ ವಸತಿ ಶಾಲೆ ಗುರುಪುರ ಫೆರ್ಮಾಯಿ ಇಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು ಕೊಡಮಾಡಿದ ಕಪಾಟು ಸಹಿತವಾದ ಪುಸ್ತಕಗಳ ವಾಚನಾಲಯ ಉದ್ಘಾಟನೆ ಮಾಡಿ ಮಾತನಾಡಿದರು.

ಮುಖ್ಯ ಅತಿಥಿ ಆಗಿ ಚುಟುಕು ಸಾಹಿತ್ಯ ಪರಿಷತ್ತಿನ ದ ಕ ಜಿಲ್ಲಾ ಕಾರ್ಯದರ್ಶಿ ಸಾಹಿತಿ ಹ. ಸು. ಒಡ್ಡಂಬೆಟ್ಟು  ಮೊದಲ ಪುಸ್ತಕವನ್ನು ವಾಚನಾಲಯ ಕ್ಜೆ ಹಸ್ತಾಂತರ ಮಾಡಿದರು. “ಇದೂ ಸಹ ಸಾಹಿತ್ಯದ ಒಂದು ರೂಪದ ಬೆಳವಣಿಗೆ ಆಗಿದೆ. ಕೇವಲ ಬರೆದು ಪ್ರಕಟಿಸಿದರೆ ಸಾಲದು,  ಓದುಗರೂ ಬೇಕು. ಆಗ ಈ ವಸತಿ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳು ಮುಂದೆ ಬೆಳವಣಿಗೆಯ ಭಾಗವಾಗಲು ಸರಿಯಾದ ಹೆಜ್ಜೆ” ಎಂದರು.

ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದ ಮಂಗಳೂರಿನ  ವೈದ್ಯ, ಪ್ರಾಧ್ಯಾಪಕ ಹಾಗೂ ನಿಯಮ ಬದ್ದ ಕವಿತಾ ರಚನೆಯಲ್ಲಿ ಪಳಗಿದ ಕೈಎನಿಸಿರುವ  ಡಾಕ್ಟರ್ ಸುರೇಶ ನೆಗಳಗುಳಿ ಇಪ್ಪತ್ತು ಪುಸ್ತಕಗಳ ಮೊದಲ ಕೊಡುಗೆ ನೀಡಿ ” “ಮಾತನಾಡಿ ವಾಟ್ಸಪ್‌ನಲ್ಲಿ ಬರೆದು  ಮರೆತು ಬಿಡುತ್ತಾರೆ. ಇದು ಆಯ್ದ ಶ್ರೇಷ್ಠ ಬರಹಗಾರರು ತಮ್ಮ ಛಾಪು ಶಾಶ್ವತ ಮಾಡಲು ಕಾರಣವಾದೀತು” ಎಂದು ಶುಭ ನುಡಿದರು.

ಕಾರ್ಯಕ್ರಮದ  ಅಧ್ಯಕ್ಷರು  ಹಾಗೂ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ರೇಮಂಡ್ ಡಿಕುನ್ಹಾ ಅವರು ಮಾತನಾಡುತ್ತಾ “ಸಾಹಿತ್ಯ ಸಾಹಿತಿಗಳು ಭಾಷೆಯ ಅವಿಭಾಜ್ಯ ಅಂಗಗಳಾಗಿವೆ. ನಮಗೆ ಮುಂದೆ ಓದುಗರನ್ನು ಸೃಷ್ಟಿಸಲು ಇದು ಅವಕಾಶವಾಗಿದೆ. ಇಂತಹ  ಕೆಲಸಗಳನ್ನು ಇನ್ನು ಮುಂದೆಯೂ  ಮಾಡುವ ಇರಾದೆ ಇದೆ” ಅಂದರು.

ಕಾರ್ಯಕ್ರಮ ನಿರೂಪಣೆಯನ್ನು ಸಂಸ್ಥೆಯ ಸಮಾಜ ವಿಜ್ಞಾನ ಶಿಕ್ಷಕರಾದ ಜಯಕರ್ ಶೆಟ್ಟಿ ಇವರು ನೆರವೇರಿಸಿದರು. ಗಣಿತ ಶಿಕ್ಷಕಿಯಾದ ಶ್ರೀಮತಿ ಅನಿತಾ ಕುಮಾರಿ ಇವರು ಸ್ವಾಗತಗೈದರು. ಗ್ರಂಥಾಲಯದ ಉಸ್ತುವಾರಿ ಹೊತ್ತಿರುವ ಗಣಕಯಂತ್ರ ಶಿಕ್ಷಕರಾಗಿರುವ ಶ್ರೀ ಪ್ರತಾಪ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ ಇವರು ಧನ್ಯವಾದಗೈದರು.