ಮಂಗಳೂರು ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳಿಗೆ ಜಾಮೀನು

ಮಂಗಳೂರು, ಜೂ.೫- ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ 29 ವಿಚಾರಣಾಧೀನ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಮಂಗಳೂರು ಕಾರಾಗೃಹದಲ್ಲಿ 210 ಕೈದಿಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಮಾತ್ರವಿದೆ. ಗುರುವಾರ 328 ವಿಚಾರಣಾಧೀನ ಕೈದಿಗಳಿದ್ದರು. ಕಾರಾಗೃಹದ ಸೆಲ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಕೈದಿಗಳನ್ನು ಹಾಕುವುದರಿಂದ ಕೊರೋನ ನಿಯಂತ್ರಣ ಕಷ್ಟವಾಗುತ್ತಿದೆ. ಅಲ್ಲದೆ ಕಳೆದೊಂದು ವರ್ಷದ ಅವಧಿಯಲ್ಲಿ 39 ಮಂದಿ ವಿಚಾರಣಾಧೀನ ಕೈದಿ ಹಾಗೂ 14 ಸಿಬ್ಬಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಗರಿಷ್ಠ 7 ವರ್ಷದೊಳಗೆ ಶಿಕ್ಷೆ ಆಗಬಹುದಾದ ಪ್ರಕರಣದ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಅಲ್ಲದೆ ನ್ಯಾಯಾಧೀಶರು, ಪೊಲೀಸ್ ಕಮಿಷನರ್, ಪೊಲೀಸ್ ವರಿಷ್ಠಾಧಿಕಾರಿ, ಜೈಲು ಅಧೀಕ್ಷಕರು, ಸರಕಾರಿ ಅಭಿಯೋಜಕರನ್ನು ಒಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಅರ್ಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಧಿಕಾರ ಹೊಂದಿದೆ. ಅದರಂತೆ ಕಳೆದ ವರ್ಷ 14 ಮತ್ತು ಈ ವರ್ಷ 15 ಸಹಿತ 29 ವಿಚಾರಣಾಧೀನ ಕೈದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧೀಕ್ಷಕ ಚಂದನ್ ಪಟೇಲ್ ತಿಳಿಸಿದ್ದಾರೆ. ಗಂಭೀರ ಸ್ವರೂಪವಲ್ಲದ ಅಪರಾಧ ಎಸಗಿ ಬಂಧಿತರಾಗಿ ಮನೆಯ ಬಡತನದ ಅಥವಾ ಇನ್ಯಾವುದೋ ಕಾರಣದಿಂದ ಜಾಮೀನು ಪಡೆಯಲು ಪ್ರಯತ್ನಿಸದೆ ಕಾರಾಗೃಹದಲ್ಲೇ ಬಾಕಿಯಾಗಿದ್ದವರನ್ನು ಅವರ ಸನ್ನಡತೆಯನ್ನು ಗಮನಿಸಿ ಜಾಮೀನಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಚಂದನ್ ಪಟೇಲ್ ತಿಳಿಸಿದ್ದಾರೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಕಾರಾಗೃಹಕ್ಕೆ ಬರುವ ಶೇ.95ರಷ್ಟು ಮಂದಿಯಲ್ಲಿ ಸೋಂಕು ಇರುತ್ತದೆ. ಕಾರಾಗೃಹಕ್ಕೆ ಸೇರಿಸಿಕೊಳ್ಳು ವಾಗ ರ್ಯಾಪಿಡ್ ಟೆಸ್ಟ್ ಮಾಡಿಸಲಾಗುತ್ತದೆ. ಅದರಲ್ಲಿ ನೆಗೆಟಿವ್ ಬಂದರೂ ಪ್ರತ್ಯೇಕ ಇರಿಸಲಾಗುತ್ತದೆ. ಸ್ವಾಬ್ ಪರೀಕ್ಷೆಯ ವರದಿ ಎರಡು ದಿನ ತಡವಾಗುವುದರಿಂದ ಸೋಂಕು ಇದ್ದರೆ ಈ ಸಂದರ್ಭದಲ್ಲಿ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕಾರಾಗೃಹದಲ್ಲಿ ಕೊರೋನ ಸೋಂಕು ಹರಡದಂತೆ ನೋಡಿಕೊಳ್ಳುವುದು ಸವಾಲಾಗಿದೆ ಎಂದು ಚಂದನ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.