ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ ಸಂಸತ್ತಿನ ಕಲಾಪ

ಮಂಗಳೂರು,ಅ.೩೦- ಅಕ್ಟೋಬರ್ ೨೮ ರಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಯುಎನ್ ಸ್ವಯಂ ಸೇವಕ ಭಾರತ, ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ತಾಂತ್ರಿಕ ಪಾಲುದಾರರ ಸಹಯೋಗದಲ್ಲಿ ನೆಹರೂ ಯುವ ಕೇಂದ್ರವು ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಜಿಲ್ಲಾ ಯುವ ಸಂಸತ್ತು (ವರ್ಚುವಲ್ ಪಾರ್ಲಿಮೆಂಟ್) ಕಾರ್ಯಕ್ರಮವನ್ನು ಆಯೋಜಿಸಿತ್ತು.
ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಅವರು ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮನ್ನು ತಾವು ಉತ್ತಮ ನಾಗರಿಕರಾಗಿ ರೂಪಿಸಿಕೊಳ್ಳಲು ಇಂತಹ ಅವಕಾಶಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ನಮ್ಮ ಸಂವಿಧಾನದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮತ್ತು ಜವಾಬ್ದಾರಿಗಳನ್ನು ಅರಿತುಕೊಳ್ಳುವಲ್ಲಿ ಈ ಚಟುವಟಿಕೆಗಳು ಬಹಳಷ್ಟು ಅನುಭವವನ್ನು ನೀಡುತ್ತವೆ ಎಂದರು.
ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಅತುಲ್ ಜೆ ನಿಕಮ್ ಮಾತನಾಡಿ, ಯುವ ಸಂಸತ್ತು ನಮ್ಮ ಸಂಸದೀಯ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ರಚನಾತ್ಮಕ ಕಾರ್ಯಕ್ರಮವಾಗಿದೆ ಎಂದರು. ಪ್ರಚಲಿತ ಸಮಸ್ಯೆಗಳ ಅನಾವರಣ, ಕೃಷಿ ಮಸೂದೆಯ ಪರಿಣಾಮ ಮತ್ತು ದುಷ್ಪರಿಣಾಮಗಳ ವಿಶ್ಲೇಷಣೆ, ಸರಕಾರದ ವೈಫಲ್ಯಗಳ ಬಗ್ಗೆ ಬಲವಾದ ಆಕ್ಷೇಪ, ಕಾರ್ಮಿಕ ಸಮಸ್ಯೆಗಳ ಬಗ್ಗೆ ಕಾವೇರಿದ ಚರ್ಚೆ, ಮಹಿಳಾ ದೌರ್ಜನ್ಯ ಬಗ್ಗೆ ಒಕ್ಕೊರಲಿನ ಖಂಡನೆ. ಶೂನ್ಯ ವೇಳೆ ನಂತರ ಪ್ರಶ್ನೋತರ ಹೀಗೆ ಸಾಗಿತ್ತು ಇಂದು ಮಂಗಳೂರಿನಲ್ಲಿ ನಡೆದ ಸಂಸತ್ತಿನ ಕಲಾಪಗಳು ಹೀಗೆ ಲೋಕಸಭೆಯಲ್ಲಿ ನಡೆಯುವ ಕಾರ್ಯ ವಿಧಾನಗಳಂತೆ ಯೂತ್ ಪಾರ್ಲಿಮೆಂಟ್ ನಡೆಯಿತು.
ಈ ಸಂದರ್ಭದಲ್ಲಿ ನೆಹರೂ ಯುವ ಕೇಂದ್ರ ರಾಷ್ಟ್ರೀಯ ಯೋಜನಾ ವ್ಯವಸ್ಥಾಪಕ ದೇಬ್ಜನಿ ಸಮಂತರಾಯ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಿಇಓ ಡಾ.ಸೆಲ್ವಮಣಿ ಆರ್, ಎನ್ವೈಕೆಎಸ್ ಉಪ ರಾಜ್ಯ ನಿರ್ದೇಶಕ ಜೈನ್ ಜಾರ್ಜ್, ಸಮಗ್ರ ಕಲಿಕೆ ಕೇಂದ್ರದ ಕನ್ವೀನರ್ ಶ್ರೀನಿವಾಸನ್ ನಂದಗೋಪಾಲ್, ನೆಹರೂ ಯುವ ಕೇಂದ್ರ ಮತ್ತು ಯುಎನ್‌ವಿ ಜಿಲ್ಲಾ ಯುವ ಸಂ ಯೋಜಕ ರಘುವೀರ್ ಸೂಟರ‍್ಪೇಟೆ ಮತ್ತಿತರರು ಉಪಸ್ಥಿತರಿದ್ದರು.