ಮಂಗಳೂರಲ್ಲಿ ಕಾಂಗ್ರೆಸ್ ಗೆಲುವು: ಡಿಕೆಶಿ ವಿಶ್ವಾಸ

ಬೆಂಗಳೂರು, ಫೆ. ೧೭- ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ ಹಾಗೂ ಯಾವುದೂ ಅಸಾಧ್ಯವಲ್ಲ. ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದೆ. ಆ ವಿಶ್ವಾಸದ ಮೇಲೆಯೇ ಇಂದು ಕಾಂಗ್ರೆಸ್ ಸಮಾವೇಶವನ್ನು ನಡೆಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿಂದು ನಡೆದಿರುವ ಕಾಂಗ್ರೆಸ್ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಿರುದ್ಯೋಗ ಹೆಚ್ಚಿದೆ. ಇಲ್ಲಿನ ಜನ ಕೆಲಸಕ್ಕಾಗಿ ಬೇರೆಡೆ ಹೋಗುತ್ತಿದ್ದಾರೆ. ಸೌದಿ, ಮುಂಬೈ ಕಡೆಗೆ ಹೆಚ್ಚಿನ ಜನ ಉದ್ಯೋಗಕ್ಕಾಗಿ ಹೋಗಿದ್ದಾರೆ. ಹಾಗೆಯೇ ಮಂಗಳೂರಿನಲ್ಲಿ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಬರುವುದು ನಿಶ್ಚಿತ ಎಂದರು.ಮಂಗಳೂರಿನಲ್ಲಿ ಧರ್ಮ ರಾಜಕೀಯ ಹೆಚ್ಚಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಧರ್ಮ ರಾಜಕೀಯದಿಂದ ಮಂಗಳೂರು ಒಂದು ರೀತಿ ಡೆಡ್ ಸಿಟಿಯಾಗಿದೆ. ವ್ಯಾಪಾರ ವಹಿವಾಟುಗಳಿಂದ ಜನರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಇವೆಲ್ಲಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧವಾಗಲಿವೆ. ಕಾಂಗ್ರೆಸ್‌ಗೆ ಜನ ಆಶೀರ್ವಾದ ಮಾಡುವ ವಿಶ್ವಾಸವೂ ಇದೆ ಎಂದರು.
ಮಂಗಳೂರಿನಲ್ಲಿ ಸಮಾವೇಶ ನಡೆಸುವ ಮೂಲಕ ಲೋಕಸಭಾ ಚುನಾವಣೆಯ ತಯಾರಿಗಳಿಗೆ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್‌ನ ಸಮಾವೇಶಗಳು ನಡೆಯಲಿವೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ೩-೪ ಹೆಸರುಗಳನ್ನು ಪಟ್ಟಿ ಮಾಡಿದ್ದೇವೆ. ಒಂದು ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ಹೇಳಿದರು.
ಹೆಚ್‌ಡಿಕೆ ಸ್ಪರ್ಧೆ: ಚಿಂತೆ ಇಲ್ಲ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ತಮ್ಮ ಸಹೋದರ ಡಿ.ಕೆ. ಸುರೇಶ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಣಕ್ಕಿಳಿಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಸುರೇಶ್ ವಿರುದ್ಧ ಯಾರೂ ಸ್ಪರ್ಧಿಸಿದರೂ ಚಿಂತೆ ಇಲ್ಲ. ನಾವು ಅಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದರು.
ಈ ಹಿಂದೆ ನಾನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡರು, ಕುಮಾರಸ್ವಾಮಿ ವಿರುದ್ದವೇ ಚುನಾವಣೆಗೆ ಸ್ಪರ್ಧಿಸಿದ್ದೆ. ಸಂಸದ ಸುರೇಶ್ ದೆಹಲಿಯಲ್ಲಿ ಕೂರುವ ಸಂಸದನಲ್ಲ, ಹಳ್ಳಿಯ ಸಂಸದ. ಜನ ಅವರ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿಯವರು ಹಿಂದೆ ಕನಕಪುರದಿಂದ ಗೆದ್ದವರೇ. ಇವರನ್ನೆಲ್ಲ ಜನ ನೋಡಿದ್ದಾರೆ. ಇವರಿಗೂ, ಸುರೇಶ್‌ಗೆ ಇರುವ ವ್ಯತ್ಯಾಸವನ್ನು ಜನ ಅರಿತಿದ್ದಾರೆ. ಹಾಗಾಗಿ ಬೆಂಗಳೂರು ಗ್ರಾಮಾಂತರದಿಂದ ಕುಮಾರಸ್ವಾಮಿ ಸೇರಿದಂತೆ ಯಾರೇ ನಿಂತರೂ ಚಿಂತೆ ಇಲ್ಲ. ಹೆಚ್‌ಡಿಕೆ ಸ್ಪರ್ಧೆಗೆ ನನ್ನ ಸ್ವಾಗತವಿದೆ ಎಂದು ಅವರು ಹೇಳಿದರು.