
ನ್ಯೂಯಾರ್ಕ್, ಏ. ೧- ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕರಣ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಮಂಗಳವಾರ ಮಧ್ಯಾಹ್ನ ಟ್ರಂಪ್ ಅವರು ನ್ಯೂಯಾರ್ಕ್‌ನಲ್ಲಿರುವ ಕೋರ್ಟ್ ವಿಚಾರಣೆಗೆ ಹಾಜರಾಗಲಿದ್ದಾರೆ. ಟ್ರಂಪ್ ಅವರಿಗೆ ಕೈಕೋಳ ತೊಡಿಸಿ ವಿಚಾರಣೆಗೆ ಹಾಜರುಪಡಿಸಲಾಗುತ್ತಿಲ್ಲ ಎಂದು ಅವರ ವಕೀಲರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಅಶ್ಲೀಲ ತಾರೆ ಸ್ಟ್ರೋಮಿ ಡೇನಿಯಲ್ಸ್‌ಗೆ ೧೩೦,೦೦೦ ಡಾಲರ್ ಮೊತ್ತ ಪಾವತಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಟ್ರಂಪ್ ಅವರನ್ನು ದೋಷಾರೋಪಣೆ ಮಾಡಿದ್ದರು. ಈ ಮೂಲಕ ಅಮೆರಿಕಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇನ್ನು ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರು ತಮ್ಮ ಖಾಸಗಿ ವಿಮಾನದಲ್ಲಿ ಫ್ಲೋರಿಡಾದಿಂದ ನ್ಯೂಯಾರ್ಕ್‌ಗೆ ಸೋಮವಾರ ಆಗಮಿಸಲಿದ್ದಾರೆ ಎನ್ನಲಾಗಿದೆ. ಬಳಿಕ ಟ್ರಂಪ್ ಅವರು ಮಂಗಳವಾರ ಅಧಿಕಾರಿಗಳಿಗೆ ಶರಣಾಗಲಿದ್ದಾರೆ ಎನ್ನಲಾಗಿದೆ. ಇನ್ನು ಟ್ರಂಪ್ ಮೇಲಿನ ಆರೋಪಗಳು ಇನ್ನೂ ಸಾರ್ವಜನಿಕವಾಗಿಲ್ಲ. ಅಲ್ಲದೆ ಟ್ರಂಪ್ ಅವರ ವಕೀಲರು ದೋಷಾರೋಪಣೆಯನ್ನು ಇನ್ನೂ ಓದಿಲ್ಲ ಎಂದು ಶುಕ್ರವಾರ ತಿಳಿಸಿದ್ದಾರೆ. ಇನ್ನು ಅಮೆರಿಕಾದಲ್ಲಿ ದೋಷಾರೋಪನೆ ಹೊಂದಿದ ಬಳಿಕ ಕೈಕೋಳ ತೊಡಿಸುವುದು ಸಾಮಾನ್ಯ ಎಂದು ಹೇಳಲಾಗಿದೆ. ಆದರೆ ಸದ್ಯ ಟ್ರಂಪ್ ವಿಚಾರಣೆಯಲ್ಲಿ ಇದು ಕೊಂಚ ಭಿನ್ನವಾಗಿರಲಿದೆ ಎನ್ನಲಾಗಿದೆ. ಟ್ರಂಪ್ ಅವರಿಗೆ ಕೈಕೋಳ ತೊಡಿಸಲಾಗುತ್ತಿಲ್ಲ. ಆದರೆ ಹಾರಾಟ ಅಥವಾ ಸುರಕ್ಷತೆಯ ಅಪಾಯ ಎಂದು ಭಾವಿಸಲಾದ ಶಂಕಿತರಿಗೆ ಮಾತ್ರ ಸಂಕೋಲೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.