ಮಂಗಳಮುಖಿಯರಿಂದ ವೇಶ್ಯಾವಾಟಿಕೆ ದಂಧೆ: ನಾಲ್ವರು ವಶಕ್ಕೆ

ಕಲಬುರಗಿ,ಮೇ.28: ನಗರದ ಶ್ರೀ ಶರಣಬಸವೇಶ್ವರ್ ಕಾಲೇಜಿನ ಹತ್ತಿರ ಇರುವ ರಾಮನಗರದ ಮನೆಯೊಂದರಲ್ಲಿ ಮಂಗಳಮುಖಿಯರು ನಡೆಸುತ್ತಿದ್ದ ವೇಶ್ಯಾವಾಟಿಕೆಯ ಮೇಲೆ ಪೋಲಿಸರು ಕಾರ್ಯಾಚರಣೆ ಕೈಗೊಂಡು ಮೂವರು ಮಂಗಳಮುಖಿಯರು ಸೇರಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮನೆಯಲ್ಲಿ ವಾಸವಾಗಿದ್ದ ಭೀಮಾ ಅಲಿಯಾಸ್ ಭೀಮು ಎಂಬಾತನು ಮಂಗಳಮುಖಿಯರನ್ನು ವೇಶ್ಯಾವಾಟಿಕೆಗಾಗಿ ಕರೆಸಿದ್ದ ಎಂದು ಸ್ವತ: ಮಂಗಳಮುಖಿಯೊಬ್ಬಳು ತಿಳಿಸಿದ್ದಾಳೆ. ಖಚಿತ ಭಾತ್ಮಿ ಮೇರೆಗೆ ಅಶೋಕನಗರ ಪೋಲಿಸ್ ಠಾಣೆಯ ಪಿಐ ಶಿವಪ್ಪ ಮತ್ತು ಸಿಬ್ಬಂದಿಗಳಾದ ನೀಲಕಂಠ್, ಶಿವಲಿಂಗಪ್ಪ, ಮಹಿಳಾ ಸಿಬ್ಬಂದಿಗಳಾದ ವಿಜಯಲಕ್ಷ್ಮೀ ಹಾಗೂ ಪಂಚರಾದ ಕೃಷ್ಣಾ ತಂದೆ ರಾಜಕುಮಾರ್ ಕಟ್ಟಿಮನಿ ಹಾಗೂ ವಿಶ್ವನಾಥ್ ತಂದೆ ಸಾಬಣ್ಣ ಸಾಹು ಅವರೊಂದಿಗೆ ಶನಿವಾರ ಸಂಜೆ 5-30ಕ್ಕೆ ಕಾರ್ಯಾಚರಣೆ ಕೈಗೊಂಡಾಗ ಒಂದು ಕೋಣೆಯಲ್ಲಿ ಇಬ್ಬರು ಅರೆಬರೆ ಬಟ್ಟೆಯಲ್ಲಿದ್ದು, ಇನ್ನೊಂದು ಕೋಣೆಯಲ್ಲಿ ಮಂಗಳಮುಖಿಯೊಬ್ಬಳು ಇದ್ದಳು. ಅವರನ್ನು ವಿಚಾರಿಸಲಾಗಿ ವೇಶ್ಯಾವಾಟಿಕೆಗೆ ಕರೆಸಿದ್ದನ್ನು ಮಂಗಳಮುಖಿಯರು ವಿಚಾರಣೆಯ ವೇಳೆ ಒಪ್ಪಿಕೊಂಡರು.
ದಾಳಿಯ ಸಂದರ್ಭದಲ್ಲಿ ಒಟ್ಟು 1090ರೂ.ಗಳು, 12 ಕಾಂಡೋಮ್‍ಗಳು, ಒಂದು ವಿಪೋ ಕಂಪೆನಿಯ ಮೊಬೈಲ್ ಫೋನ್‍ನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.