ಮಂಗಲ, ಸಲಗಾರ, ಮಾಲಾ ನಾಮಪತ್ರ ಸಲ್ಲಿಕೆ

ಬೆಂಗಳೂರು, ಮಾರ್ಚ್, ೩೦- ಏಪ್ರಿಲ್ ೧೭ರಂದು ನಡೆಯುವ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರರು ಇಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿವಂಗತ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಲ ಅಂಗಡಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು
ಇಂದು ಬೆಳಿಗ್ಗೆ ವಿಮಾನದ ಮೂಲಕ ಬೆಳಗಾವಿಗೆ ಪಯಣ ಬೆಳೆಸಿದ ಸಿಎಂ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು.
ಮುಖ್ಯಮಂತ್ರಿಗಳ ಜತೆ ನಾಮಪತ್ರ ಸಲ್ಲಿಕೆಗೂ ಮುನ್ನ ಮಂಗಲ ಅಂಗಡಿಯವರು ಶುಭಗಳಿಗೆಯಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಕೆ.ಎಸ್ ಈಶ್ವರಪ್ಪ ಇವರ ಉಪಸ್ಥಿತಿಯಲ್ಲಿ ಒಂದು ಸೆಟ್ ನಾಮಪತ್ರ, ಸ್ಥಳೀಯ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಜತೆಗೂಡಿ ಮತ್ತೊಂದು ಸೆಟ್ ನಾಮಪತ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಸಭೆಯ ಉಪಾಧ್ಯಕ್ಷ ಆನಂದ ಮಾಮನಿ ಅವರ ಜತೆ ೩ನೇ ಸೆಟ್ ನಾಮಪತ್ರ ಸಲ್ಲಿಸಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್ ಜಾರಕಿಹೊಳಿ ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಶರಣು ಸಲಗಾರ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಕ್ಷೇತ್ರದ ಉಸ್ತುವಾರಿ ಯಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಚಿವ ವಿ ಸೋಮಣ್ಣ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು
ನಾಮಪತ್ರ ಸಲ್ಲಿಕೆಗೂ ಮುನ್ನ ಬಸವಕಲ್ಯಾಣ ಪಟ್ಟಣದಲ್ಲಿ ಬಿಜೆಪಿಯ ಬೃಹತ್ ಸಮಾವೇಶವನ್ನು ನಡೆಸಲಾಯಿತು ನಂತರ ನಾಯಕರುಗಳು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಸಹ ಇಂದು ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹಾಜರಿದ್ದರು ಮಾಲಾ ನಾರಾಯಣರವರು ಮಾರ್ಚ್ ೨೪ರಂದು ತಮ್ಮ ಕುಟುಂಬಸ್ಥರೊಂದಿಗೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಇಂದು ಪಕ್ಷದ ನಾಯಕರೊಂದಿಗೆ ಮತ್ತೊಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ನಾಯಕರು ಬಸವಕಲ್ಯಾಣ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿದ್ದು ವಿಶೇಷ.
ಬಂಡಾಯ
ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತ ರಾಗಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಗೆ ಸಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಖೂಬಾ ತಮ್ಮ ನಾಮಪತ್ರ ಸಲ್ಲಿಸಿದರು.
ಖೂಬಾ ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಬೆಂಬಲಿಗರ ಸಮಾವೇಶ ನಡೆಸಿದ್ದು, ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು ಗಮನ ಸೆಳೆಯಿತು.
ಎನ್‌ಸಿಪಿ ಅಭ್ಯರ್ಥಿ ಕಣಕ್ಕೆ
ಬಸವ ಕಲ್ಯಾಣ ಕ್ಷೇತ್ರದಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ಜಿ ಮುಳೆ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದ ಎಂ.ಜಿ ಮುಳೆ ಆ ಪಕ್ಷದ ಟಿಕೆಟ್ ಸಿಗದ ಕಾರಣ ರಾಜೀನಾಮೆ ನೀಡಿ ಎನ್‌ಸಿಪಿ ಸೇರಿ ಎನ್‌ಸಿಪಿಯಿಂದ ಉಪಚುನಾವಣಾ ಅಭ್ಯರ್ಥಿಯಾಗಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ನಿನ್ನೆಯೇ ಸಲ್ಲಿಸಿದ್ದಾರೆ
ಮುಖ್ಯಮಂತ್ರಿ ಬೆಳಗಾವಿಯಲ್ಲೇ ಮೊಕ್ಕಾಂ
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಬೆಳಗಾವಿಯಲ್ಲಿ ಮೊಕ್ಕಾಂ ಹೂಡಿದ್ದು, ನಾಮಪತ್ರ ಸಲ್ಲಿಸಿದ ನಂತರ ಬೆಳಗಾವಿ ಬಿಜೆಪಿ ಘಟಕ ಆಯೋಜಿಸಿರುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡ ರು.
ಇದಾದ ನಂತರ ಮುಖ್ಯಮಂತ್ರಿಗಳು ಇಂದು ಸಂಜೆ ಸ್ಥಳೀಯ ಬಿಜೆಪಿ ನಾಯಕರುಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವರು. ಚುನಾವಣೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುವಂತೆ ಸ್ಥಳೀಯ ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳುವರು ಎನ್ನಲಾಗಿದೆ ಮುಖ್ಯಮಂತ್ರಿಗಳು ಕರೆದಿರುವ ಈ ಸಭೆಯಲ್ಲಿ ಬೆಳಗಾವಿಯ ಸಚಿವರುಗಳು ಬಿಜೆಪಿ ಶಾಸಕರುಗಳು ಹಾಗೂ ಪ್ರಮುಖ ಮುಖಂಡರುಗಳು ಪಾಲ್ಗೊಳ್ಳುವರು.