ಮಂಗಲ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ವಿಶೇಷಜಾತ್ರೆ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.20:- ತಾಲ್ಲೂಕಿನ ಮಂಗಲ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ವಿಶೇಷ ಜಾತ್ರೆ ನಡೆಯುತ್ತದೆ. ಆದರೆ, ಎಲ್ಲಾ ಜಾತ್ರೆಗಳಂತೆ ಸಾಮಾನ್ಯವಾದ ಜಾತ್ರೆ ಇದಾಗಿರದೇ ಒಂದು ಸಮುದಾಯದ ಜನರು ಎಲ್ಲರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದೇ ಈ ಜಾತ್ರೆಯ ವಿಶೇಷತೆ.
ಮಾ.17 ರಿಂದ ಇಂದಿನ ತನಕ ಅದ್ದೂರಿಯಾಗಿ ಜಾತ್ರೆ ನಡೆಯುತ್ತಿದ್ದು, ಇದು ಹಿರಿಯರ ಹಬ್ಬ ಅಂಥಲೇ ಜನಪ್ರಿಯವಾಗಿದೆ. ಹತ್ತಾರು ಜನಾಂಗದವರು ಈ ಗ್ರಾಮದಲ್ಲಿ ನೆಲೆಸಿದ್ದು ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ.
ಕುರುಬ ಸಮುದಾಯ ಈ ಜಾತ್ರೆಯ ಆಕರ್ಷಣೆ ಕೇಂದ್ರವಾಗಿದ್ದು, ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಅಶ್ಲೀಲವಾಗಿ, ಕೊಂಕು, ವಿಡಂಬನೆಯಿಂದ ಬಾಜಿ ಕಟ್ಟಿದಂತೆ ಬೈಯುತ್ತಾರೆ.
ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗಲಿದ್ದು ಇವರ ಬೈಗುಳ ಕೇಳಲೆಂದೇ ಅಕ್ಕಪಕ್ಕದ ಊರಿನ ಜನರು ಸೇರಿಜಾತ್ರೆಗೆ ಆಗಮಿಸುತ್ತಾರೆ.
ಮಂಗಲ ಗ್ರಾಮದ ವಿಪ್ರ ಮುಖಂಡರಾದ ಶ್ರೀಕಂಠಮೂರ್ತಿ ಹಾಗೂ ಉಪ್ಪಾರ ಸಮುದಾಯದ ಯಜಮಾನರಾದ ಕ್ಯಾತಶೆಟ್ಟಿ ಈ ಕುರಿತು ಮಾತನಾಡಿ, ಶತಮಾನಗಳಿಂದಲೂ ಈ ಹಿರಿಯರ ಹಬ್ಬ ಆಚರಣೆಯಲ್ಲಿದ್ದು, ಬೀರೇಶ್ವರ ಸ್ವಾಮಿ ಉತ್ಸವ ಹಾಗೂ ಓಕುಳಿ ಆಡಲಿದ್ದಾರೆ. ಎಲ್ಲಾ ಸಮುದಾಯದವರೂ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಹಬಾಳ್ವೆಗೆ ಮುನ್ನುಡಿ ಬರೆಯುತ್ತಾರೆ. ಕುರುಬ ಸಮುದಾಯದವರು ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ.
ಆ ಸಮುದಾಯ ಮಾತ್ರ ಈ ಬೈಗುಳದಲ್ಲಿ ಪಾಲ್ಗೊಳ್ಳಬೇಕು, ಅವರು ಮಾತ್ರ ಬೈಯಲಿದ್ದು, ಇದು ಒಂದು ರೀತಿ ಮೆನರಂಜನೆಯಾಗಿಯೂ ಕಾಣಲಿದೆ ಎಂದರು.
ಒಟ್ಟಾರೆ ಜಾತ್ರೆ ಎಂದರೆ ಕೇವಲ ಉತ್ಸವ ಮಾತ್ರ ನಡೆಯುವುದು ಸಾಮಾನ್ಯ. ಆದರೆ, ವಾಚಾಮಗೋಚರವಾಗಿ ಬೈಯುವುದು ಕೂಡ ಇದರ ಭಾಗವಾಗಿರುವುದು ವಿಶೇಷವೇ ಆಗಿದೆ.