ಮಂಗನಕಾಯಿಲೆ ತಡೆಗೆ ಸಲಹೆ ನೀಡಲು ವೈದ್ಯರಿಗೆ ಸೂಚನೆ

ನವದೆಹಲಿ,ಆ.೫- ದೇಶದಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ ತಡೆಗೆ ಅನುಸರಿಸಬೇಕಾದ ಕ್ರಮಗಳು ಮತ್ತು ಶಿಫಾರಸ್ಸು ಕುರಿತಂತೆ ಮಾರ್ಗದರ್ಶನ ಮಾಡುವಂತೆ ಸಾರ್ವಜನಿಕ ಆರೋಗ್ಯದಲ್ಲಿ ಪರಿಣತಿ ಹೊಂದಿರುವ ಪ್ರಮುಖ ವೈದ್ಯರು ಮತ್ತು ವಿಜ್ಞಾನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.ದೇಶದಲ್ಲಿ ಇದುವರೆಗೆ ೯ ಮಂಗನ ಕಾಯಿಲೆ ಪತ್ತೆಯಾಗಿವೆ, ಕೇರಳದಲ್ಲಿ ಐದು ಮತ್ತು ದೆಹಲಿಯಿಂದ ನಾಲ್ಕು ಪ್ರಕರಣಗಳು ವರದಿಯಾಗಿವೆ .ಹೀಗಾಗಿ ಸೋಂಕು ತಡೆಗೆ ಸಲಹೆ ನೀಡಲು ಕೇಳಿದೆ.ಪ್ರಕರಣಗಳ ಹೆಚ್ಚಳ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ತುರ್ತಾಗಿ ಸಲಹೆಗಳನ್ನು ತುರ್ತು ವೈದ್ಯಕೀಯ ಪರಿಹಾರ (ಇಎಂಆರ್) ವಿಭಾಗಕ್ಕೆ ಸಲ್ಲಿಸಲು ತಿಳಿಸಲಾಗಿದೆ.ದೇಶದಲ್ಲಿ ಮಂಗನ ಕಾಯಿಲೆಯ ನಿರ್ವಹಣೆಯ ಕುರಿತು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ನವೀಕರಿಸಲು ಇದನ್ನು ಬಳಸಲಾಗುವುದು” ಎಂದು ಸಭೆಯಲ್ಲಿ ಭಾಗವಹಿಸಿದ್ದ ತಜ್ಞರೊಬ್ಬರು ಹೇಳಿದ್ದಾರೆ.ಆರೋಗ್ಯ ಸಚಿವಾಲಯದ ಎಮರ್ಜೆನ್ಸಿ ಮೆಡಿಕಲ್ ರಿಲೀಫ್ ನಿರ್ದೇಶಕ ಎಲ್ ಸ್ವಸ್ತಿಚರಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತರಾಷ್ಟ್ರೀಯ ಅಥವಾ ರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ಸಮಸ್ಯೆಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ.ಏಮ್ಸ್ ನ ಹಲವು ಖ್ಯಾತ ವೈದ್ಯರು , ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆ ಯ ಅಧಿಕಾರಿಗಳು ಮಂಗನ ಕಾಯಿಲೆ ಹರಡುವುದನ್ನು ತಡೆಗಟ್ಟಲು ಮತ್ತು ಪ್ರಕರಣಗಳನ್ನು ಪತ್ತೆಹಚ್ಚಲು ಅಗತ್ಯವಿರುವ ಕ್ರಮಗಳ ಕುರಿತು ಚಿಂತನ ಮಂಥನಕ್ಕೆ ಕರೆದ ಸಭೆಯಲ್ಲಿ ಭಾಗವಹಿಸಿದ್ದರು.