ಮಂಗಗಳ ಸೆರೆ ಯಶಸ್ವಿ ಕಾರ್ಯಾಚರಣೆ :
 ಮಂಗಗಳ ಉಪಟಳದಿಂದ ಬೇಸತ್ತಿದ್ದ ಜನ ನಿರಾಳ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಜ.03: ಪಟ್ಟಣದ ತುಂಬೆಲ್ಲಾ ಶಾಲಾ ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮಂಗಗಳನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕಳೆದ ಎಂಟು ದಿನಗಳಿಂದ ನಡೆಸಿದ ಮಂಗಗಳ ಸೆರೆ ಕಾರ್ಯಾಚರಣೆಯು ಭಾನುವಾರ 62 ಮಂಗಗಳನ್ನು ಸೆರೆ ಹಿಡಿಯುವ ಮೂಲಕ ಮುಕ್ತಾಯಗೊಳಿಸಿದರು.
ನೂರಾರು ಮಂಗಗಳು ಪಟ್ಟಣದಲ್ಲಿ ಬೀಡು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯು ಮಂಗಗಳ ಸೆರೆ ಕಾರ್ಯಾಚರಣೆ ಡಿ.26 ರಿಂದ ಪ್ರಾರಂಭಿಸಿ ಜ.2ರವರೆಗೆ ನಡೆಸಿತು. ಒಟ್ಟು 392 ಮಂಗಗಳನ್ನು ಬೋನ್‌ಗಳ ಮೂಲಕ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಯಿತು.
ಹೆಚ್ಚಾಗಿ ಊರಿನ ಮೊಬೈಲ್ ಟವರ್‌ಗಳಲ್ಲಿ ರಾತ್ರಿವಾಸ ಮಾಡುತ್ತ ಹಗಲಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮಂಗಗಳ ಕಾಟ ತಪ್ಪಿಸುವಂತೆ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಒತ್ತಡ ಹೇರಿದ್ದರು.ಮನವಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮಂಗಗಳನ್ನು ಅರಣ್ಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.
 ಮಂಗಗಳನ್ನು ಸೆರೆಹಿಡಿಯುವ ತಂಡದ ಸದಸ್ಯರಾದ ವೀರಯ್ಯ ಮೃತ್ಯುಂಜಯ ಸರಗಣಾಚಾರಿ, ವಿರುಪಾಕ್ಷಯ್ಯ ಸರಗಣಾಚಾರಿ ಹಾಗೂ ದಶರಥ ಚೋಳಚುಗುಡ್ಡ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಎಂಟು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದ ಮಂಗಗಳನ್ನು ಕಮಲಾಪುರ ಅರಣ್ಯಕ್ಕೆ ಬಿಡಲಾಗಿದೆ’ ಎಂದು ಅರಣ್ಯಾಧಿಕಾರಿ ಕೆ.ಆರ್.ಗಿರೀಶ್ ತಿಳಿಸಿದರು.
ಮಂಗಗಳ ಕಾಟಕ್ಕೆ ಅಂಗಡಿ ಮಾಲೀಕರು ತರಕಾರಿಯವರು ಹಾಗೂ ಮಹಿಳೆಯರು ಮತ್ತು ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಬಹುತೇಕ ಜನ ಈಗ ನಿರಾಳರಾಗಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಹೆಚ್,ಕೆ,ತಿಮ್ಮಪ್ಪ ಹೇಳಿದರು.
ಮಂಗಗಳು ಹಲವಾರು ವರ್ಷಗಳಿಂದ ಮಕ್ಕಳಿಗೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಮಂಗಗಳ ಸೆರೆ ಹಿಡಿಯುವ ತಂಡದ ದೊಂದಿಗೆ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಡಿ.ಬಿ.ಈರಣ್ಣ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ತಿಳಿಸಿದರು.