ಮಂಗಗಳ ಕಾಟ:ರಿಮ್ಸ್ ರೋಗಿಗಳಿಗೆ ಸಂಕಟ

ರಾಯಚೂರು,ಜೂ.೬- ಜಿಲ್ಲೆಯ ಪ್ರತಿಷ್ಠಿತ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಮಂಗಗಳ ಕಾಟ ಜೋರಾಗಿದೆ. ನಾಯಿ, ಹಂದಿಗಳ ಹಾವಳಿಗೆ ಹೇಗೋ ಬ್ರೇಕ್ ಹಾಕಿರುವ ರಿಮ್ಸ್ ಸಿಬ್ಬಂದಿ ಮಂಗಗಳ ಹಾವಳಿ ತಡೆಯಲು ಮಾತ್ರ ಸಾಧ್ಯವಾಗುತ್ತಿಲ್ಲ.
ಆಹಾರ ಅರಸಿ ಆಸ್ಪತ್ರೆಗೆ ನುಗ್ಗುವ ಕೋತಿಗಳು ಡಸ್ಟ್ ಬಿನ್‌ನ ತ್ಯಾಜ್ಯ ಚೆಲ್ಲಾಪಿಲ್ಲಿ ಮಾಡಿ, ಎಲ್ಲೆಂದರಲ್ಲಿ ಓಡಾಡಿ ರೋಗಿಗಳನ್ನು ಹೆದರಿಸುತ್ತಿವೆ. ನವಜಾತ ಶಿಶುಗಳು, ಬಾಣಂತಿಯರು ಇರೋ ವಾರ್ಡ್‌ಗಳ ಬಳಿಯೂ ಕೋತಿಗಳು ನುಗ್ಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ವಾರ್ಡ್‌ಗಳಿಗೆ ನುಗ್ಗಿ ಜನರನ್ನು ಹೆದರಿಸಿ ಊಟ, ತಿಂಡಿ ಕಿತ್ತಿಕೊಳ್ಳುವುದು ಸಾಮಾನ್ಯವಾಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ನಗರಸಭೆ ಸಹ ಮಂಗಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಹೀಗಾಗಿ ಪಟಾಕಿ ಹೊಡೆದು ಸಾಧ್ಯವಾದಷ್ಟು ಮಂಗಗಳನ್ನು ಓಡಿಸುತ್ತಿದ್ದೇವೆ, ಆದರೂ ಬರುತ್ತಲೇ ಇವೆ ಎಂದು ರಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ರೋಗಿಗಳು ಹಾಗೂ ರೋಗಿಗಳ ಕಡೆಯವರು ಮಾತ್ರ ಮಂಗಗಳ ಕಾಟಕ್ಕೆ ಹೆದರಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯುವ ಮುನ್ನ ಮಂಗಗಳ ಹಾವಳಿಗೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.