ಮಂಕಿಪಾಕ್ಸ್ ಮತ್ತಷ್ಟು ಉಲ್ಬಣ

ನ್ಯೂಯಾರ್ಕ್, ಜು.೨೮- ಕೊರೊನಾ ರೀತಿಯಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗದಿದ್ದರೂ ಮಂಕಿಪಾಕ್ಸ್ ಪ್ರಕರಣಗಳು ಇದೀಗ ನಿಧಾನವಾಗಿ ವಿಶ್ವದ ಹಲವು ಭಾಗಗಳಲ್ಲಿ ಏರಿಕೆಯಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಎಚ್ಚರಿಕೆ ನೀಡಿದೆ. ವಿಶ್ವಾದ್ಯಂತ ಸುಮಾರು ೧೮ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಬಹುತೇಕ ಯುರೋಪ್‌ನಲ್ಲಿ ಇದು ಕಾಣಿಸಿಕೊಂಡಿದೆ.
ಈಗಾಗಲೇ ಶನಿವಾರದಂದು ಮಂಕಿಪಾಕ್ಸ್ ಪ್ರಕರಣವನ್ನು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆರಂಭಿಕ ಹಂತದಲ್ಲಿ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ಇದೀಗ ಯುರೋಪ್‌ನಲ್ಲೇ ಅತೀ ಹೆಚ್ಚು ವರದಿಯಾಗಿದೆ. ೧೮ ಸಾವಿರ ಪ್ರಕರಣಗಳ ಪೈಕಿ ಹೆಚ್ಚು ಸೋಂಕಿತರು ಯುರೋಪ್‌ನಿಂದಲೇ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಮಂಕಿಪಾಕ್ಸ್ ಪ್ರಕರಣಗಳ ಪೈಕಿ ೧೦ ಪ್ರತಿಶತ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಐವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಆಫ್ರಿಕಾ ದೇಶದವರಾಗಿದ್ದಾರೆ ಎಂದು ತಿಳಿಸಿದೆ. ಅಲ್ಲದೆ ಅತ್ತ ಅಮೆರಿಕಾ ಖಂಡದಲ್ಲಿ ಕೂಡ ಪ್ರಕರಣಗಳು ತೀವ್ರ ರೀತಿಯಲ್ಲಿ ವರದಿಯಾಗುತ್ತಿದೆ. ಪಾನ್ ಅಮೆರಿಕಾ ಹೆಲ್ತ್ ಆರ್ಗನೈಸೇಶನ್ (ಪಿಎಹೆಚ್‌ಒ) ಪ್ರಕಾರ, ೫,೩೦೦ ಪ್ರಕರಣಗಳು ಅಮೆರಿಕಾ ಖಂಡದ ೧೮ ದೇಶಗಳಲ್ಲಿ ವರದಿಯಾಗಿದೆ. ಅಮೆರಿಕಾ, ಕೆನಡಾ, ಬ್ರೆಜಿಲ್‌ನಲ್ಲೇ ಹೆಚ್ಚಿನ ಸೋಂಕಿತರಿದ್ದಾರೆ. ಆದರೆ ಇದುವರೆಗೂ ಇಲ್ಲಿ ಸಾವಿನ ಪ್ರಕರಣ ವರದಿಯಾಗಿಲ್ಲ.