ಮಂಕಿ ಪಾಕ್ಸ್ ನಿರ್ವಹಣೆಗೆ ಕೇಂದ್ರ ಕಾರ್ಯಪಡೆ

ನವದೆಹಲಿ, ಆ. ೧- ಜಗತ್ತಿನ ಹಲವು ದೇಶಗಳಲ್ಲಿ ಮಂಕಿ ಪಾಕ್ಸ್ ವ್ಯಾಪಕವಾಗಿ ಹರಡುತ್ತಿರುವಂತೆಯೇ ದೇಶದಲ್ಲೂ ನಾಲ್ಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಸೃಷ್ಠಿಯಾಗಿದೆ. ಅಲ್ಲದೆ ಕೇರಳದಲ್ಲಿ ಮಂಗನ ಕಾಯಿಲೆಗೆ ರೋಗಿಯೊಬ್ಬರು ಮೃತಪಡುತ್ತಿದ್ದಂತೆಯೇ ಎಚ್ಚೆತ್ತ ಕೇಂದ್ರ ಸರ್ಕಾರ ದೇಶದಲ್ಲಿ ಪರಿಸ್ಥಿತಿಯ ಮೇಲೆ ನಿಗಾವಹಿಸಲು ಉನ್ನತ ಮಟ್ಟದ ಕಾರ್ಯಪಡೆ ರಚಿಸಿದೆ.
ಈ ಮಧ್ಯೆ, ರಾಜಧಾನಿ ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ಮಂಕಿಪಾಕ್ಸ್ ಪತ್ತೆಯಾಗಿದ್ದು, ಅವರ ಬಗ್ಗೆ ತೀವ್ರ ನಿಗಾವಹಿಸಲಾಗಿದೆ.
ದೇಶದಲ್ಲಿ ಮಂಗನ ಕಾಯಿಲೆಯ ನಾಲ್ಕು ಪ್ರಕರಣ ವರದಿಯಾಗುತ್ತಿದ್ದಂತೆ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಕಾರ್ಯಪಡೆ ರಚಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ೭೮ ದೇಶಗಳಿಂದ ೧೮,೦೦೦ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.ಈ ಹಿನ್ನೆಲೆಯಲ್ಲಿ ದೇಶದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ನಿರ್ದೇಶಿಸಿದೆ.
ಮಂಕಿಪಾಕ್ಸ್ ಪ್ರಕರಣ ಕುರಿತು ರೋಗನಿರ್ಣಯ ಸೌಲಭ್ಯಗಳ ವಿಸ್ತರಣೆ ಮತ್ತು ದೇಶದಲ್ಲಿ ಸೋಂಕಿಗೆ ಲಸಿಕೆ ಅನ್ವೇಷಿಸಲು ಸರ್ಕಾರಕ್ಕೆ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡಲು ಕಾರ್ಯಪಡೆ ರಚಿಸಲಾಗಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
“ತಂಡದ ನೇತೃತ್ವವನ್ನು ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ವಹಿಸಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ, ಫಾರ್ಮಾ ಮತ್ತು ಬಯೋಟೆಕ್ ಸೇರಿದಂತೆ ಸದಸ್ಯರು” ಕಾರ್ಯಪಡೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಇದುವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ – ಕೇರಳದಲ್ಲಿ ಮೂರು ಪ್ರಕರಣಗಳು ಮತ್ತು ದೆಹಲಿಯಲ್ಲಿ ಒಂದು ಪ್ರಕರಣ ದೃಡಪಟ್ಟಿದೆ.
ಮಂಕಿ ಪಾಕ್ಸ್ ನಿಂದ ಸಾವು: ತನಿಖೆ:
ಕೇರಳದಲ್ಲಿ ಮಂಕಿಪಾಕ್ಸ್ ತರಹದ ರೋಗಲಕ್ಷಣಗಳನ್ನು ಹೊಂದಿರುವ ಯುವಕ ಸಾವನ್ನಪ್ಪಿದ ನಂತರ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ
“ಚಾವಕ್ಕಾಡ್ ಕುರಂಜಿಯೂರಿನಲ್ಲಿ ಮಂಕಿಪಾಕ್ಸ್ ಲಕ್ಷಣಗಳಿರುವ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ. ಅವರು ತ್ರಿಶೂರ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ” ಎಂದು ಜಾರ್ಜ್ ಹೇಳಿದ್ದಾರೆ.

ನಾಳೆ ಸಿಎಂ ಸಭೆ
ದೇಶದಲ್ಲಿ ಮಂಕಿಪಾಕ್ಸ್ ಆತಂಕಗಳು ಹೆಚ್ಚಿರುವ ಬೆನ್ನಲ್ಲೆ ರಾಜ್ಯದಲ್ಲಿ ಮಂಕಿಪಾಕ್ಸ್‌ನ್ನು ನಿಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಸಭೆಯನ್ನು ಕರೆದಿದ್ದಾರೆ.
ನೆರೆಯ ಕೇರಳದಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿರುವುದು, ರಾಜ್ಯದಲ್ಲಿ ಮಂಕಿಪಾಕ್ಸ್ ತಡೆಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಜತೆ ಸಭೆ ನಡೆಸುವರು.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಈ ಸಭೆಯಲ್ಲಿ ಮಂಕಿಪಾಕ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಹೇಳಿದರು.
ನಾಳಿನ ಸಭೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಯಾಣಿಕರು, ಪ್ರವಾಸಿಗರನ್ನು ತಪಾಸಣೆ ಮಾಡುವ ಬಗ್ಗೆ ರಾಜ್ಯದಲ್ಲಿ ಮಂಕಿಪಾಕ್ಸ್ ಪತ್ತೆಗೆ ಪ್ರಯೋಗಾಲಯ ಸ್ಥಾಪನೆ, ಔಷಧಿಗಳನ್ನು ಒದಗಿಸುವ ಬಗ್ಗೆ ಸೇರಿದಂತೆ ಎಲ್ಲದರ ಬಗ್ಗೆಯೂ ತೀರ್ಮಾನ ಕೈಗೊಂಡು ನಿರ್ದೇಶನ ನೀಡುತ್ತೇವೆ ಎಂದರು.
ಮಳೆ ಅನಾಹುತ ಚರ್ಚೆ
ನಾಳೆ ಮಂಕಿಪಾಕ್ಸ್ ಸಭೆಯ ಜತೆಗೆ ಇತ್ತೀಚಿನ ಮಳೆಯಿಂದ ರಾಜ್ಯದಲ್ಲಿ ಆಗಿರುವ ಹಾನಿ ಪರಿಹಾರ ಕಾರ್ಯಗಳ ಬಗ್ಗೆಯೂ ಹಿರಿಯ ಅಧಿಕಾರಿಗಳ ಸಭೆ ನಡೆಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದರು.
ಇತ್ತೀಚಿನ ಮಳೆಯಿಂದ ಎಲ್ಲೆಲ್ಲಿ ಏನೆಲ್ಲ ಅನಾಹುತವಾಗಿದೆ. ಎಷ್ಟು ಬೆಳೆ ನಷ್ಟವಾಗಿದೆ ಎಂಬೆಲ್ಲ ಮಾಹಿತಿ ಪಡೆದು ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ಹೇಳಿದರು.
ರಾಜ್ಯದ ಹಲವೆಡೆ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಳೆ ಪರಿಹಾರ ಕಾರ್ಯಗಳು ನಡೆದಿವೆಯಾದರೂ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಾರ್ಯಗಳ ಚುರುಕಿಗೆ ಆದೇಶ ನೀಡುವುದಾಗಿ ಅವರು ತಿಳಿಸಿದರು.