ಮಂಕಿಪಾಕ್ಸ್‌ಗೆ ೫ ಬಲಿ

ಮ್ಯಾಡ್ರಿಡ್,ಜು.೩೦- ವಿಶ್ವದಲ್ಲಿ ಅತಿ ಹೆಚ್ಚು ಮಂಕಿಪಾಕ್ಸ್ ರೋಗ ಕಾಣಿಸಿಕೊಂಡಿರುವ ಯುರೋಪಿನಲ್ಲಿ ಕಾಯಿಲೆಗೆ ಸಂಬಂಧಿಸಿದ ಮೊದಲ ಸಾವು ವರದಿಯಾಗಿದೆ.

ಆಫ್ರಿಕಾದ ಖಂಡದ ಹೊರಗೆ ಮೊದಲ ಮಂಕಿಪಾಕ್ಸ್-ಸಂಬಂಧಿತ ಸಾವು ಬ್ರೆಜಿಲ್ ನಲ್ಲಿ ವರದಿಯಾಗಿತ್ತು.ಇದೀಗ ಸ್ಪೇನ್ ನಲ್ಲಿ ಸಾವು ದೃಢಪಟ್ಟಿದೆ..ಇದುವರೆಗೆ ವಿಶ್ವದಲ್ಲು ೫ ಮಂದಿ ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ವೇಗವಾಗಿ ಹರಡುತ್ತಿರುವ ಮಂಕಿಪಾಕ್ಸ್ ರೋಗ ತಡೆಗಟ್ಟಲು ಅನುಕೂಲವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿ ಎಚ್ಚರಿಕೆ ವಹಿಸುವಂತೆ ಕಟ್ಟಿನಿಟ್ಟಿನ ಸೂಚನೆ ನೀಡಿದೆ.

ಇತ್ತೀಚಿನ ವರದಿಯಲ್ಲಿ, ಸ್ಪ್ಯಾನಿಷ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ೪,೨೯೮ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ.ಇದರಲ್ಲಿ ೩,೭೫೦ ರೋಗಿಗಳಲ್ಲಿ ಮಾಹಿತಿ ಹೊಂದಿದ್ದು, ಹೆಚ್ಚಿನ ವಿವರಗಳನ್ನು ನೀಡದೆ ೧೨೦ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅದರಲ್ಲು ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ.

ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಆರೋಗ್ಯ ಸಚಿವಾಲಯದ ವಕ್ತಾರರು ನಿರಾಕರಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಜಗತ್ತಿನ ೭೦ಕ್ಕೂ ಅಧಿಕ ದೇಶಗಳಲ್ಲಿ ೧೮ ಸಾವಿರಕ್ಕೂ ಅಧಿಕ ಮಂದಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು ಜಗತ್ತನ್ನು ಮತ್ತಷ್ಟು ತಲ್ಲಣ ಮೂಡಿಸುವಂತೆ ಮಾಡಿದೆ.

ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಎಲ್ಲಾ ದೇಶಗಳು ಕಟ್ಟಿನಿಟ್ಟಿನ ಅಗತ್ಯ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ಎಲ್ಲಾ ದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ