ಭ್ರೂಣಲಿಂಗ ಪತ್ತೆ ಹಚ್ಚಿದರೆ ವೈದ್ಯರಿಗೆ ಜೈಲು: ಡಾ. ಧ್ಯಾನೇಶ್ವರ ನೀರಗುಡಿ

ಬೀದರ್:ಮಾ.17: ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಈ ಕೃತ್ಯ ಎಸಗಿದವರೆ ವೈದ್ಯರಿಗೆ ಜೈಲು ಶಿಕ್ಷೆ ಇದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿ.ಸಿ.ಹೊಸಮತ್ತು ಪಿ.ಎನ್.ಡಿ.ಟಿ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೊದಲ ಸಲ ಅಪರಾಧ ಮಾಡಿದರೆ ವೈದ್ಯರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ?10 ಸಾವಿರ ದಂಡ, ಎರಡನೇ ಸಲದ ಅಪರಾಧಕ್ಕೆ 5 ವರ್ಷಗಳ ಜೈಲು ಶಿಕ್ಷೆ, ?50 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡಿದರೆ ಅಂತಹವರಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ?10 ಸಾವಿರ ದಂಡ ವಿಧಿಸಲಾಗುತ್ತದೆ. ಗರ್ಭಿಣಿಗೆ ಆಕೆಯ ಪತಿ, ಸಂಬಂಧಿಕರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದರೆ ಮೊದಲ ಸಲದ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ ?50 ಸಾವಿರ ದಂಡ ಹಾಗೂ ನಂತರದ ಅಪರಾಧಕ್ಕೆ 5 ವರ್ಷ ಜೈಲು, ?1 ಲಕ್ಷ ದಂಡ ಹಾಕಲಾಗುತ್ತದೆ ಎಂದು ವಿವರಿಸಿದರು.

ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಪಿ.ಸಿ ಮತ್ತು ಪಿ.ಎನ್.ಡಿ.ಟಿ. ಕಾಯ್ದೆ 1994ರ ಪ್ರಕಾರ ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದೆ. ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ ಬೇಕು. ಆದರೆ. ಮಗಳಾಗಿ ಏಕೆ ಬೇಡ? ಸ್ತ್ರೀ ಮತ್ತು ಪುರುಷರ ಲಿಂಗಾನುಪಾತ ಸಮನಾಗಿ ಇರಬೇಕು ಎಂದರು.

ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಬಾರದು. ಹಾಗೇನಾದರೂ ಮಾಡುತ್ತಿದ್ದರೆ ಜಿಲ್ಲಾ ಸಲಹಾ ಸಮಿತಿಯ ಗಮನಕ್ಕೆ ತಂದರೆ ಕ್ರಮ ಜರುಗಿಸಲಾಗುವುದು ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ ಮಾತನಾಡಿ, ಜಿಲ್ಲೆಯಲ್ಲಿ 116 ಸ್ಕ್ಯಾನಿಂಗ್ ಕೇಂದ್ರಗಳಿವೆ. ಇವುಗಳಲ್ಲಿ 106 ಕಾರ್ಯನಿರ್ವಹಿಸುತ್ತಿವೆ. ಒಂಬತ್ತು ಸರ್ಕಾರಿ, ಮಿಕ್ಕುಳಿದವು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಾಗಿವೆ. ಈ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿ ಯಾವುದೇ ಭ್ರೂಣಲಿಂಗ ಪತ್ತೆ ಮಾಡದಂತೆ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.

ರೇಡಿಯಾಲಜಿಸ್ಟ್ ಅಮಿತ್ ಷಾ, ಬೀದರ್ ನಗರದ ತಾಯಿ -ಮಕ್ಕಳ ನೂರು ಹಾಸಿಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸೊಹೆಲ್, ಇನ್ನರ್ ವೀಲ್ ಕ್ಲಬ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಮಾಳಗೆ, ವಾರ್ತಾಧಿಕಾರಿ ಜಿ.ಸುರೇಶ, ಎಫ್.ಪಿ.ಎ.ಐ. ಅಧ್ಯಕ್ಷ ಡಾ. ನಾಗೇಶ, ‘ಟೀಮ್ ಯುವ’ ಸಂಯೋಜಕ ವಿನಯಕುಮಾರ ಮಾಳಗೆ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಉಮೇಶ ಪಾಂಡ್ರೆ ಹಾಜರಿದ್ದರು.