ಭ್ರೂಣಲಿಂಗ ಪತ್ತೆ, ಸ್ತ್ರೀ ಭ್ರೂಣ ಹತ್ಯೆ ಮಾಡಿದರೆ ಕಾನೂನು ಕ್ರಮ: ಡಿಎಚ್‍ಓ ಎಚ್ಚರಿಕೆ

ಬೀದರ:ನ.24: ಪಿ.ಸಿ. ಮತ್ತು ಪಿ.ಎನ್.ಡಿ. ಕಾಯ್ದೆ ಅಡಿಯ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ:ವಿ.ಜಿ.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 23ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಡಾ.ವಿ.ಜಿ.ರೆಡ್ಡಿ ಅವರು, ಕಾನೂನುಬಾಹೀರವಾಗಿ ಭ್ರೂಣಲಿಂಗ ಪತ್ತೆ ಹಾಗೂ ಸ್ತ್ರೀ ಭ್ರೂಣ ಹತ್ಯೆ ಮಾಡುವವರ ಮತ್ತು ಈ ಕೆಲಸಕ್ಕೆ ಸಹಾಯ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ.ಬಿ ಅವರು ಮಾತನಾಡಿ, ಭ್ರೂಣಲಿಂಗ ಪತ್ತೆ ಹಾಗೂ ಸ್ತ್ರೀ ಭ್ರೂಣ ಹತ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಸ್ ನಿಲ್ದಾಣಗಳಲ್ಲಿ ಕಳೆದ ಒಂದು ತಿಂಗಳಿನಿಂದ ಆಡಿಯೋ ಜಿಂಗಲ್ಸ್ ಪ್ರಸಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಭ್ರೂಣಲಿಂಗ ಪತ್ತೆ ಹಚ್ಚುವವರ ಮಾಹಿತಿ ನೀಡಿದವರಿಗೆ ರೂ.5000 ಹಾಗೂ ಪ್ರಕರಣ ದಾಖಲಿಸಲು ಸಹಕರಿಸಿದವರಿಗೆ 50,000 ರೂ.ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಉಪಸ್ಥಿತರಿದ್ದ ವಾರ್ತಾ ಇಲಾಖೆಯ ಅಧಿಕಾರಿ ಹಾಗೂ ಪಿ.ಸಿ. ಮತ್ತು ಪಿ.ಎನ್.ಡಿ. ಕಾಯ್ದೆ ಅಡಿಯ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸದಸ್ಯರಾದ ಗವಿಸಿದ್ದಪ್ಪ ಹೊಸಮನಿ, ಕೃಷ್ಣಮೂರ್ತಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಆರತಿ ಆರ್ ಕೃಷ್ಣಮೂರ್ತಿ, ಚಿಕಿತ್ಸಾ ಡಯಾಗ್ನೋಸ್ಟಕ್ಸ್‍ದ ರೆಡಿಯೋಲಾಜಿಸ್ಟ್ ಡಾ.ಅಮಿತ್ ಶಾಹ, ವಕೀಲರಾದ ಶ್ರೀ ಉಮೇಶ ಪಾಂಡ್ರೆ, ಭಾರತಿಯ ವೈದ್ಯಕಿಯ ಸಂಘದ ಶಾಖೆಯ ಅಧ್ಯಕ್ಷರಾದ ಡಾ.ವಿನೋದ ಸಾವಳಗಿ, ಸ್ತ್ರೀರೋಗ ತಜ್ಞರ ಸಂಘದ ಡಾ.ವಿಜಯಶ್ರೀ ಬಶೆಟ್ಟಿ ಅವರು ಸಭೆಗೆ ಹಲವಾರು ಸಲಹೆಗಳನ್ನು ನೀಡಿದರು. ಶ್ರೀ ಮಹೇಶ ರೆಡ್ಡಿ ಅವರು ವಂದಿಸಿದರು.