ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ: ಡಿಎಚ್‍ಒ ಡಾ.ಜನಾರ್ಧನ


ಬಳ್ಳಾರಿ,ಫೆ.25: ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಅನುಷ್ಠಾನವನ್ನು ಸ್ಕ್ಯಾನಿಂಗ್ ಕೈಗೊಳ್ಳುವ ತಜ್ಞವೈದ್ಯರು ಮನಃಪೂರ್ವಕವಾಗಿ ಅನುಷ್ಠಾನ ಮಾಡುವ ಮೂಲಕ ಗಂಡು ಹೆಣ್ಣಿನ ಅನುಪಾತದ ತಾರತಮ್ಯವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರು, ಪ್ರಸೂತಿ ತಜ್ಞರು ಹಾಗೂ ವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯ ಸ್ಕ್ಯಾನಿಂಗ್ ಮಾಡಿದ ಸಂದರ್ಭದಲ್ಲಿ ಭ್ರೂಣದ ಆರೋಗ್ಯದ ವಿಷಯ ಭ್ರೂಣದ ಬೆಳವಣಿಗೆ, ನ್ಯೂನ್ಯತೆಗಳ ಮಾಹಿತಿಯನ್ನು ಮಾತ್ರ ನೀಡುವ ಕಾರ್ಯ ಜರುಗಬೇಕು. ಭ್ರೂಣ ಲಿಂಗದ ಕುರಿತು ಮಾಹಿತಿ ನೀಡಿದಲ್ಲಿ ಅದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಯಾರಾದರೂ ಭ್ರೂಣಲಿಂಗ ಪತ್ತೆ ಜಾಹಿರಾತು ಪ್ರಕಟಿಸಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವಿದೆ ಎಂದರು.
ಪ್ರತಿಯೊಬ್ಬ ವೈದ್ಯರು ಯಾರೂ ಅವಕಾಶ ನೀಡಬಾರದು. ಕಾಯ್ದೆಯನ್ನು ಪರಿಣಾಮಕಾರಿ ಜಾರಿಗಾಗಿ ಈಗಾಗಲೇ ಕಾರ್ಯ ನಿರ್ವಹಿಸುವ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ತಪ್ಪದೇ ನಿಯಮಗಳನ್ನು ಪಾಲಿಸಲು ಸೂಚಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, 1994 ರ ಕಾಯ್ದೆ ಆರಂಭದಲ್ಲಿ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾತ್ರ ಇತ್ತು. ನಂತರದಲ್ಲಿ ಟೆಸ್ಟ್‍ಟ್ಯೂಬ್ ಬೆಬಿ ಸೆಂಟರ್‍ಗಳಲ್ಲಿ ಗರ್ಭಪೂರ್ವದಲ್ಲಿಯೇ ಭ್ರೂಣ ಗುರ್ತಿಸುವ ಅವಕಾಶಗಳು ಇದ್ದುದರಿಂದ ದುರುಪಯೋಗದ ಸಾಧ್ಯತೆ ಹಿನ್ನೆಲೆಯಲ್ಲಿ 2002ರಲ್ಲಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಪಿಸಿಪಿಎನ್‍ಡಿಟಿ ಎಂದು ಬದಲಿಸಲಾಯಿತು ಎಂದರು.
ಪ್ರಸ್ತುತ ವೈದ್ಯಕೀಯ ಕ್ಷೇತ್ರ ಅಮೂಲಾಗ್ರವಾಗಿ ಬೆಳೆಯುತ್ತಿರುವುದರಿಂದ ಸಮಾಜದಲ್ಲಿ ಹೆಣ್ಣಿನ ಅನುಪಾತವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಎಲ್ಲರೂ ಹೊರುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ನ್ಯಾಯವಾದಿಗಳಾದ ಶಿವಲೀಲಾ, ನಾಗರತ್ನ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ರಾಮಕೃಷ್ಣ ನಾಯಕ್, ರೇಡಿಯೋಲಾಜಿಸ್ಟ್ ಡಾ.ರಾಘವೇಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಅರುಣ್ ಕುಮಾರ್, ಗೋಪಾಲ್ ಕೆ.ಹೆಚ್ ಸೇರಿದಂತೆ ಪ್ರಸೂತಿ ತಜ್ಞರು ಹಾಗೂ ವೈದ್ಯರು ಉಪಸ್ಥಿತರಿದ್ದರು.