ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

ಇಸ್ಲಾಮಾಬಾದ್,ಮೇ.9-ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರನ್ನು ಅರೆ ಸೇನಾ ಪಡೆ ಬಂಧಿಸಿದೆ.
ಇಸ್ಲಾಮಾಬಾದ್ ನ್ಯಾಯಾಲಯ ಆವರಣದಲ್ಲಿಂದು ಬಂಧಿಸಲಾಗಿದೆ. ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಸಲಾಗಿದೆ.
ಮಾರ್ಚ್‌ ತಿಂಗಳಿನಲ್ಲಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಪೊಲೀಸರು ಲಾಹೋರ್‌ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪಿಟಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.
ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್‌ ಅನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪವನ್ನು ಇಮ್ರಾನ್‌ ಎದುರಿಸುತ್ತಿದ್ದಾರೆ.
ಇಮ್ರಾನ್‌ ಖಾನ್‌ ಅವರ ಅಧಿಕಾರದ ಅವಧಿಯಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್‌ ಉಡುಗೊರೆಯಾಗಿ ಬಂದಿತ್ತು. ಆದರೆ ಅವರು ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೇ ವ್ಯಾಪಾರಿಯೊಬ್ಬರಿಗೆ 18 ಕೋಟಿ ಪಾಕಿಸ್ತಾನ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಫೆಡರಲ್ ತನಿಖಾ ಸಂಸ್ಥೆ ತನಿಖೆ ‌ನಡೆಸಿತ್ತು.